Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 27
ದಾವೀದನ ಕೀರ್ತನೆ.
ಯೆಹೋವ ದೇವರು ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿದ್ದಾರೆ.
ನಾನು ಯಾರಿಗೂ ಭಯಪಡೆನು?
ಯೆಹೋವ ದೇವರು ನನ್ನ ಜೀವದ ಭದ್ರಾಶ್ರಯವಾಗಿದ್ದಾರೆ.
ನಾನು ಯಾರಿಗೂ ಹೆದರೆನು?
ದುಷ್ಟರು ನನ್ನನ್ನು ಬೀಳಿಸಬೇಕೆಂದು
ನನಗೆ ವಿರೋಧವಾಗಿ ಸಮೀಪಿಸುವಾಗ,
ನನ್ನ ವೈರಿಗಳು
ತಾವೇ ಎಡವಿಬಿದ್ದರು.
ನನಗೆ ವಿರೋಧವಾಗಿ ಇಳಿದರೂ
ನನ್ನ ಹೃದಯವು ಭಯಪಡದು;
ನನ್ನ ಮೇಲೆ ಯುದ್ಧ ಸೈನ್ಯವು ನಡೆದರೂ
ನಾನು ಭರವಸೆಯಿಂದಿರುವೆನು.
ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ,
ಅದರ ದಯೆಯನ್ನು ನೋಡುತ್ತಾ
ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ
ಇರಬೇಕೆಂಬ ಒಂದೇ ವರವನ್ನು
ಯೆಹೋವ ದೇವರಿಂದ ಕೇಳಿಕೊಂಡು
ಅದನ್ನೇ ಹುಡುಕುತ್ತಿರುವೆನು.
ಕೇಡಿನ ಸಮಯದಲ್ಲಿ ಯೆಹೋವ ದೇವರು ನನ್ನನ್ನು
ತಮ್ಮ ಗುಡಾರದಲ್ಲಿ ಬಚ್ಚಿಡುವರು.
ತಮ್ಮ ಪರಿಶುದ್ಧ ಗುಡಾರದಲ್ಲಿ ನನ್ನನ್ನು ಮರೆಮಾಡುವರು.
ಎತ್ತರವಾದ ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವರು.
ಈಗ ನನ್ನ ತಲೆಯು ನನ್ನ ಸುತ್ತಲಿರುವ
ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು,
ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು;
ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು.
ಯೆಹೋವ ದೇವರೇ, ನಾನು ಕೂಗುವ ಸ್ವರವನ್ನು ಕೇಳಿರಿ;
ನನ್ನನ್ನು ಕರುಣಿಸಿ ಉತ್ತರವನ್ನು ಕೊಡಿರಿ.
ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: “ದೇವರ ಮುಖವನ್ನು ಹುಡುಕು,”
ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು.
ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ;
ನಿಮ್ಮ ಸೇವಕನಾದ ನನ್ನನ್ನು ತಳ್ಳಬೇಡಿರಿ;
ನೀವೇ ನನಗೆ ಸಹಾಯಕರಾಗಿದ್ದೀರಿ;
ನನ್ನ ರಕ್ಷಕ ಆಗಿರುವ ದೇವರೇ, ನನ್ನನ್ನು ತ್ಯಜಿಸಬೇಡಿರಿ.
ನನ್ನನ್ನು ಬಿಟ್ಟುಬಿಡಬೇಡಿರಿ.
ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ,
ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು.
ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ;
ನನ್ನ ವಿರೋಧಿಗಳ ನಿಮಿತ್ತ
ಸಮಹಾದಿಯಲ್ಲಿ ನನ್ನನ್ನು ನಡೆಸಿರಿ.
ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ;
ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ
ನನಗೆ ವಿರೋಧವಾಗಿ ಎದ್ದಿದ್ದಾರೆ.
ಇದೊಂದು ನನ್ನ ಭರವಸೆಯಾಗಿರುವುದು:
ನಾನಂತೂ ಯೆಹೋವ ದೇವರ ಒಳಿತನ್ನು
ಜೀವಿತರ ದೇಶದಲ್ಲಿ ಕಾಣುವೆನು.
ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು;
ಅವರು ನಿನ್ನ ಹೃದಯವನ್ನು ದೃಢಪಡಿಸುವರು;
ಯೆಹೋವ ದೇವರಿಗಾಗಿ ಕಾದಿರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.