Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 26

ದಾವೀದನ ಕೀರ್ತನೆ.

ಯೆಹೋವ ದೇವರೇ, ನನ್ನನ್ನು ನಿರ್ದೋಷನನ್ನಾಗಿ ನಿರ್ಣಯಿಸಿರಿ,

ನಾನು ದೋಷವಿಲ್ಲದ ಜೀವನ ನಡೆಸಿದ್ದೇನೆ;

ನಾನು ಯೆಹೋವ ದೇವರಲ್ಲಿ ಕದಲದೆ

ಭರವಸೆ ಇಟ್ಟಿದ್ದೇನೆ.

ಯೆಹೋವ ದೇವರೇ, ನನ್ನನ್ನು ಶೋಧಿಸಿ, ಪರೀಕ್ಷಿಸಿರಿ;

ನನ್ನ ಅಂತರಿಂದ್ರಿಯಗಳನ್ನೂ ನನ್ನ ಹೃದಯವನ್ನೂ ಶೋಧಿಸಿರಿ.

ನಿಮ್ಮ ಒಡಂಬಡಿಕೆಯ ಪ್ರೀತಿಯು ಯಾವಾಗಲೂ ನನ್ನ ಮನಸ್ಸು ತುಂಬ ಇದೆ;

ನಿಮ್ಮ ನಂಬಿಗಸ್ತಿಕೆಯಲ್ಲಿ ನಾನು ಬಾಳುತ್ತಿದ್ದೇನೆ.

ಮೋಸಗಾರರ ಸಂಗಡ ನಾನು ಕುಳಿತುಕೊಳ್ಳಲಿಲ್ಲ;

ವಂಚಕರ ಸಂಗಡ ನಾನು ಹೋಗುವುದಿಲ್ಲ.

ದುರ್ಮಾರ್ಗಿಗಳ ಸಭೆಯನ್ನು ದ್ವೇಷಿಸಿದ್ದೇನೆ;

ದುಷ್ಟರ ಸಂಗಡ ಕುಳಿತುಕೊಳ್ಳುವುದಿಲ್ಲ.

ನನ್ನ ಕೈಗಳನ್ನು ನಿರ್ಮಲವಾಗಿ ತೊಳೆದುಕೊಂಡು,

ಯೆಹೋವ ದೇವರೇ, ನಿಮ್ಮ ಬಲಿಪೀಠವನ್ನು ಸುತ್ತುತ್ತಾ,

ಸ್ತೋತ್ರ ಧ್ವನಿಯೆತ್ತಿ ಸಾರುತ್ತಾ

ನಿಮ್ಮ ಅದ್ಭುತಗಳನ್ನೆಲ್ಲಾ ತಿಳಿಸುವೆನು.

ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ,

ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ.

ಪಾಪಿಗಳ ಸಂಗಡ ನನ್ನ ಪ್ರಾಣವನ್ನೂ,

ರಕ್ತಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡಿರಿ.

ಅವರ ಕೈಗಳಲ್ಲಿ ಕೇಡು ಇದೆ;

ಅವರ ಬಲಗೈ ಲಂಚಗಳಿಂದ ತುಂಬಿದೆ.

ನಾನಾದರೋ ನನ್ನ ಯಥಾರ್ಥತೆಯಲ್ಲಿ ನಡೆಯುತ್ತೇನೆ;

ನನ್ನನ್ನು ವಿಮೋಚಿಸಿರಿ; ನನಗೆ ಕರುಣೆಯುಳ್ಳವರಾಗಿರಿ.

ನನ್ನ ಪಾದವು ಸಮ ನೆಲದಲ್ಲಿ ನಿಂತಿದೆ;

ನಾನು ಮಹಾಸಭೆಯಲ್ಲಿ ಯೆಹೋವ ದೇವರನ್ನು ಸ್ತುತಿಸುವೆನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.