Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 28
ದಾವೀದನ ಕೀರ್ತನೆ.
ಯೆಹೋವ ದೇವರೇ,
ನೀವು ನನಗೆ ಸಂರಕ್ಷಿಸುವ ಬಂಡೆಯಾಗಿದ್ದೀರಿ.
ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ,
ಮೌನವಾಗಿರಬೇಡಿರಿ; ನೀವು ಸುಮ್ಮನಿದ್ದರೆ
ನಾನು ಸಮಾಧಿಯಲ್ಲಿದ್ದವನಿಗೆ ಸಮಾನನಾಗುವೆನು.
ನಾನು ನಿಮಗೆ ಮೊರೆಯಿಡುವಾಗ,
ನನ್ನ ಕೈಗಳನ್ನು ನಿಮ್ಮ ಮಹಾಪರಿಶುದ್ಧ
ಸ್ಥಳದ ಕಡೆಗೆ ಎತ್ತುವಾಗ
ನನ್ನ ವಿಜ್ಞಾಪನೆಯನ್ನು ಲಾಲಿಸಿರಿ.
ದುಷ್ಟರ ಸಂಗಡವೂ ಅಪರಾಧ ಮಾಡುವವರ
ಸಂಗಡವೂ ನನ್ನನ್ನು ಎಳೆಯಬೇಡಿರಿ;
ಅವರು ತಮ್ಮ ನೆರೆಯವರೊಂದಿಗೆ ಸಮಾಧಾನವಾಗಿ ಮಾತನಾಡುತ್ತಾರೆ;
ಆದರೆ ಕೇಡು ಅವರ ಹೃದಯದಲ್ಲಿ ಇದೆ.
ಅವರ ಕೃತ್ಯಗಳ ಪ್ರಕಾರವಾಗಿಯೂ,
ಅವರ ಕೆಟ್ಟತನಗಳ ಪ್ರಕಾರವಾಗಿಯೂ ಅವರಿಗೆ ಪ್ರತಿಫಲಕೊಡಿರಿ;
ಅವರ ಕೈಕೃತ್ಯಗಳ ಪ್ರಕಾರವಾಗಿ ಅವರಿಗೆ ಕೊಡಿರಿ,
ಅರ್ಹತೆಗೆ ತಕ್ಕಂತೆಯೇ ಅವರಿಗೆ ಬರಮಾಡಿರಿ.
ಅವರು ಯೆಹೋವ ದೇವರ ಕೃತ್ಯಗಳನ್ನೂ,
ಅವರ ಕೈಗಳ ಕೆಲಸವನ್ನೂ ಲಕ್ಷಿಸುವುದಿಲ್ಲ;
ಆದ್ದರಿಂದ ದೇವರು ಅವರನ್ನು
ವೃದ್ಧಿಗೊಳಿಸದೆ ದಂಡಿಸುವರು.
ಯೆಹೋವ ದೇವರಿಗೆ ಸ್ತುತಿಯುಂಟಾಗಲಿ;
ಕರುಣೆಗಾಗಿ ನನ್ನ ಮೊರೆಯನ್ನು ಅವರು ಕೇಳಿದ್ದಾರೆ.
ಯೆಹೋವ ದೇವರು ನನ್ನ ಬಲವೂ, ನನ್ನ ಗುರಾಣಿಯೂ ಆಗಿದ್ದಾರೆ;
ನನ್ನ ಹೃದಯವು ಅವರಲ್ಲಿ ಭರವಸೆ ಇಟ್ಟದ್ದರಿಂದ ನಾನು ಸಹಾಯ ಹೊಂದಿದೆನು;
ನನ್ನ ಹೃದಯವು ಬಹಳವಾಗಿ ಉತ್ಸಾಹಪಡುವುದು;
ನನ್ನ ಕೀರ್ತನೆಯಿಂದ ಅವರನ್ನು ಕೊಂಡಾಡುವೆನು.
ಯೆಹೋವ ದೇವರು ತಮ್ಮ ಜನರಿಗೆ ಬಲವಾಗಿದ್ದಾರೆ;
ತಮ್ಮ ಅಭಿಷಿಕ್ತನಿಗೆ ರಕ್ಷಣೆಯ ಕೋಟೆ ಆಗಿದ್ದಾರೆ.
ನಿಮ್ಮ ಜನರನ್ನು ರಕ್ಷಿಸಿರಿ; ನಿಮ್ಮ ವಾರಸುದಾರರನ್ನು ಆಶೀರ್ವದಿಸಿರಿ;
ನೀವು ಅವರ ಕುರುಬ ಆಗಿದ್ದು; ಅವರನ್ನು ಯಾವಾಗಲೂ ಮುನ್ನಡೆಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.