Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 96

ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ;

ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ.

ಯೆಹೋವ ದೇವರಿಗೆ ಹಾಡಿರಿ, ಅವರ ನಾಮವನ್ನು ಸ್ತುತಿಸಿರಿ;

ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.

ಜನಾಂಗಗಳಲ್ಲಿ ಅವರ ಘನತೆಯನ್ನೂ,

ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.

ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ;

ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.

ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ;

ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.

ಘನತೆಯೂ, ಪ್ರಭೆಯೂ ಅವರ ಮುಂದೆ ಇವೆ;

ಬಲವೂ, ಸೌಂದರ್ಯವೂ ಅವರ ಪರಿಶುದ್ಧ ಸ್ಥಳದಲ್ಲಿ ಇವೆ.

ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ ನೀವು ಮಹಿಮೆಯನ್ನೂ

ಬಲವನ್ನೂ ಅರ್ಪಿಸಿರಿ.

ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ;

ಕಾಣಿಕೆಯನ್ನು ತೆಗೆದುಕೊಂಡು ಅವರ ಅಂಗಳಗಳಿಗೆ ಬನ್ನಿರಿ.

ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ;

ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ.

“ಯೆಹೋವ ದೇವರು ಆಳಿಕೆ ಮಾಡುತ್ತಾರೆ;

ಆದ್ದರಿಂದ ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ;

ಅವರು ಜನರಿಗೆ ನೀತಿಯಲ್ಲಿ ನ್ಯಾಯತೀರಿಸುತ್ತಾರೆ,” ಎಂದು ಎಲ್ಲಾ ಜನಾಂಗಗಳಲ್ಲಿ ಹೇಳಿರಿ.

ಆಕಾಶವು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ;

ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.

ಹೊಲಗಳೂ, ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ;

ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ.

ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ,

ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ;

ಜನರಿಗೆ ತಮ್ಮ ಸತ್ಯದಿಂದಲೂ

ನ್ಯಾಯತೀರಿಸಲು ಬರುತ್ತಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.