Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 95

ಬನ್ನಿರಿ, ಯೆಹೋವ ದೇವರಿಗೆ ಉತ್ಸಾಹ ಗೀತೆಯನ್ನು ಹಾಡೋಣ;

ನಮ್ಮ ರಕ್ಷಣೆಯ ಬಂಡೆಯಾಗಿರುವ ದೇವರಿಗೆ ಜಯಧ್ವನಿ ಮಾಡೋಣ.

ಧನ್ಯವಾದದೊಡನೆ ಅವರ ಸನ್ನಿಧಿಯಲ್ಲಿ ಮುಂದೆ ಬಂದು

ಕೀರ್ತನೆಗಳಿಂದ ಅವರಿಗೆ ಜಯಧ್ವನಿ ಮಾಡೋಣ.

ಯೆಹೋವ ದೇವರು ಮಹಾ ದೇವರು,

ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ.

ಅವರ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಇವೆ;

ಬೆಟ್ಟಗಳ ಬಲವು ಅವರದೇ.

ಸಮುದ್ರವು ಅವರಿಗೆ ಸೇರಿದ್ದು; ಅವರು ಅದನ್ನು ಸೃಷ್ಟಿಸಿದರು;

ಅವರ ಕೈಗಳು ಒಣ ಭೂಮಿಯನ್ನು ರೂಪಿಸಿದವು.

ಬನ್ನಿರಿ, ಆರಾಧಿಸೋಣ;

ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ.

ಅವರು ನಮ್ಮ ದೇವರು;

ನಾವು ಅವರ ಹುಲ್ಲುಗಾವಲಿನ ಪ್ರಜೆಗಳಾಗಿದ್ದೇವೆ,

ನಾವು ಅವರು ಪರಿಪಾಲಿಸುವ ಮಂದೆಯೂ ಆಗಿದ್ದೇವೆ.

ನೀವು ಈ ಹೊತ್ತು ಅವರ ಸ್ವರಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೆಯದು.

“ನೀವು ಮೆರೀಬದಲ್ಲಿ1 ಮಾಡಿದಂತೆ,

ಹೌದು, ಅಂದು ನೀವು ಮರುಭೂಮಿಯ ಮಸ್ಸಾ2 ಎಂಬ ಸ್ಥಳದಲ್ಲಿ ಮಾಡಿದಂತೆ, ನಿಮ್ಮ ಹೃದಯವನ್ನು ಕಠಿಣಪಡಿಸಬೇಡಿರಿ.

ನಾನು ಮಾಡಿದ್ದನ್ನು ಕಂಡಿದ್ದರೂ,

ಅಲ್ಲಿ ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿದರು.

ನಾಲ್ವತ್ತು ವರ್ಷ ಆ ಸಂತತಿಗೆ ಬೇಸರಗೊಂಡು,

‘ಇವರು ತಮ್ಮ ಹೃದಯದಲ್ಲಿ ತಪ್ಪಿಹೋಗುವ ಜನರಾಗಿದ್ದಾರೆ,

ನನ್ನ ಮಾರ್ಗಗಳನ್ನು ಇವರು ಅರಿಯರು,’ ಎಂದೆನು.

ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು

ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.

Source notes (2)
  1. Footnote ಮೆರೀಬ ಅಂದರೆ ಜಗಳ ಎಂದು ಅರ್ಥ. ನೋಡಿರಿ ವಿಮೋ 17:7; ಅರಣ್ಯ 17:7
  2. Footnote ಮಸ್ಸಾ ಅಂದರೆ ಪರೀಕ್ಷೆ . ನೋಡಿರಿ ವಿಮೋ 17:7; ಅರಣ್ಯ 17:7

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.