Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 97

ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಭೂಮಿಯು ಉಲ್ಲಾಸಪಡಲಿ;

ದ್ವೀಪಗಳ ಸಮೂಹವು ಸಂತೋಷಪಡಲಿ.

ಮೇಘಗಳೂ, ಕಾರ್ಗತ್ತಲೂ ಅವರ ಸುತ್ತಲು ಇವೆ;

ನೀತಿಯೂ, ನ್ಯಾಯವೂ ಅವರ ಸಿಂಹಾಸನದ ಅಸ್ತಿವಾರವಾಗಿದೆ.

ಬೆಂಕಿಯು ಅವರ ಮುಂದೆ ಹೋಗಿ

ಅವರ ವೈರಿಗಳನ್ನು ಸುತ್ತಲೂ ದಹಿಸುವುದು.

ಅವರ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ;

ಭೂಮಿಯು ಕಂಡು ನಡುಗುತ್ತದೆ.

ಯೆಹೋವ ದೇವರ ಸನ್ನಿಧಿಯಲ್ಲಿ ಬೆಟ್ಟಗಳು ಕರಗುತ್ತವೆ,

ಸಮಸ್ತ ಭೂಮಿಯು ಮೇಣದ ಹಾಗೆ ಕರಗುತ್ತವೆ.

ಆಕಾಶವು ಅವರ ನೀತಿಯನ್ನು ತಿಳಿಸುತ್ತದೆ;

ಎಲ್ಲಾ ಜನಗಳು ಅವರ ಮಹಿಮೆಯನ್ನು ಕಾಣುತ್ತಾರೆ.

ವಿಗ್ರಹಗಳನ್ನು ಪೂಜಿಸಿ,

ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ;

ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ!

ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು

ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು;

ಯೆಹೂದದ ಪುತ್ರಿಯರು1 ಸಹ ಉಲ್ಲಾಸಿಸುತ್ತಾರೆ.

ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ;

ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ.

ಯೆಹೋವ ದೇವರನ್ನು ಪ್ರೀತಿಸುವವರು ಕೆಟ್ಟದ್ದನ್ನು ಹಗೆ ಮಾಡುವರು;

ದೇವರು ತಮ್ಮ ಭಕ್ತರ ಪ್ರಾಣಗಳನ್ನು ಕಾಪಾಡಿ,

ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವರು.

ನೀತಿವಂತನಿಗೋಸ್ಕರ ಬೆಳಕೂ,

ಯಥಾರ್ಥ ಹೃದಯದವರಿಗೋಸ್ಕರ ಅವರ ಹೃದಯದಲ್ಲಿ ಆನಂದವೂ ಇರುವುದು.

ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ;

ದೇವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.

Source notes (1)
  1. Footnote ಯೆಹೂದದ ಪುತ್ರಿಯರು ಅಂದರೆ, ಚೀಯೋನಿನ ಸುತ್ತಲಿನ ಹಳ್ಳಿಗಳು

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.