Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 4
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ.
ನನ್ನ ನೀತಿಯಾಗಿರುವ ದೇವರೇ,
ನಾನು ಕರೆಯುವಾಗ ನನಗೆ ಸದುತ್ತರವನ್ನು ಕೊಡಿರಿ.
ನನ್ನ ಸಂಕಟದಿಂದ ನನಗೆ ನೆಮ್ಮದಿಯನ್ನು ನೀಡಿರಿ;
ನನ್ನನ್ನು ಕರುಣಿಸಿ, ನನ್ನ ಪ್ರಾರ್ಥನೆಯನ್ನು ಕೇಳಿರಿ.
ಓ ಮಾನವ, ನೀನು ಎಲ್ಲಿಯತನಕ ನನ್ನ ಮಹಿಮೆಯನ್ನು ಅವಮಾನಕ್ಕೆ ಗುರಿಪಡಿಸುವಿ?
ನೀನು ಎಲ್ಲಿಯತನಕ ವ್ಯರ್ಥವಾದದ್ದನ್ನು ಪ್ರೀತಿಸಿ, ಸುಳ್ಳನ್ನು1 ಹುಡುಕುವಿ?
ಯೆಹೋವ ದೇವರು ತಮ್ಮ ನಂಬಿಗಸ್ತರನ್ನು
ತಮಗಾಗಿ ಪ್ರತ್ಯೇಕಿಸಿದ್ದಾರೆ ಎಂದು ತಿಳಿದುಕೊಳ್ಳಿರಿ;
ನಾನು ಬೇಡಿಕೊಳ್ಳಲು ಯೆಹೋವ ದೇವರು ನನಗೆ ಉತ್ತರ ನೀಡುವರು.
ನಡುಗಿರಿ,2 ಪಾಪಮಾಡಬೇಡಿರಿ;
ನೀವು ನಿಮ್ಮ ಹಾಸಿಗೆಯ ಮೇಲೆ ಇರುವಾಗ,
ನಿಮ್ಮ ಹೃದಯಗಳಲ್ಲಿ ಧ್ಯಾನಮಾಡಿ ಮೌನವಾಗಿರಿ.
ನೀತಿಯ ಬಲಿಗಳನ್ನು ಅರ್ಪಿಸಿರಿ
ಯೆಹೋವ ದೇವರಲ್ಲಿ ನಿಮ್ಮ ಭರವಸೆಯನ್ನು ಇಡಿರಿ.
ಯೆಹೋವ ದೇವರೇ, “ನಮಗೆ ಒಳ್ಳೆಯದನ್ನು ಮಾಡುವವರು ಯಾರು?”
ಎಂದು ಕೇಳುವವರು ಅನೇಕರಿದ್ದಾರೆ.
ನಿಮ್ಮ ಮುಖಪ್ರಕಾಶವು ನಮ್ಮ ಮೇಲೆ ಬೆಳಗಲಿ.
ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ
ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ
ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.
ಸಮಾಧಾನವಾಗಿ ಮಲಗಿ ನಿದ್ರೆ ಮಾಡುವೆನು,
ಏಕೆಂದರೆ ಯೆಹೋವ ದೇವರೇ,
ನೀವೊಬ್ಬರೇ ನನ್ನನ್ನು ಸುರಕ್ಷಿತವಾಗಿ ವಾಸಿಸುವಂತೆ ಮಾಡುತ್ತೀರಿ.
Source notes (2)
- Footnote ಅಥವಾ, ಸುಳ್ಳು ದೇವರನ್ನು
- Footnote ನಡುಗಿರಿ ಹೀಬ್ರೂ ಭಾಷೆಯಲ್ಲಿ ಕೋಪಗೊಂಡರೂ
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.