Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 3
ದಾವೀದನ ಕೀರ್ತನೆ. ಅವನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ್ದು.
ಯೆಹೋವ ದೇವರೇ, ನನ್ನ ವೈರಿಗಳು ಬಹುಜನ!
ನನಗೆ ವಿರೋಧವಾಗಿ ಏಳುವವರು ಎಷ್ಟೋ ಜನ!
“ದೇವರು ಅವನನ್ನು ಬಿಡುಗಡೆ ಮಾಡುವುದಿಲ್ಲ,” ಎಂದು
ಅನೇಕರು ನನ್ನ ಬಗ್ಗೆ ಹೇಳುತ್ತಾರೆ.
ಆದರೆ ಯೆಹೋವ ದೇವರೇ, ನೀವೇ ನನ್ನ ಸುತ್ತಲಿರುವ ಗುರಾಣಿಯೂ,
ನನ್ನ ಮಹಿಮೆಯೂ ನನ್ನ ತಲೆ ಮೇಲೆತ್ತುವವರೂ1 ಆಗಿದ್ದೀರಿ.
ನಾನು ನನ್ನ ಧ್ವನಿಯೆತ್ತಿ ಯೆಹೋವ ದೇವರಿಗೆ ಮೊರೆಯಿಡುವೆನು,
ಅವರು ತಮ್ಮ ಪರಿಶುದ್ಧ ಪರ್ವತದಿಂದ ನನಗೆ ಉತ್ತರಕೊಡುವರು.
ನಾನು ಮಲಗಿ ನಿದ್ರಿಸುವೆನು;
ಯೆಹೋವ ದೇವರು ನನ್ನನ್ನು ಕಾಪಾಡಿದ್ದರಿಂದ ನಾನು ಎಚ್ಚರಗೊಂಡೆನು.
ಸಾವಿರಾರು ಜನರು ನನಗೆ ವಿರೋಧವಾಗಿ
ನನ್ನ ಸುತ್ತುವರಿದರೂ ನಾನು ಭಯಪಡೆನು.
ಯೆಹೋವ ದೇವರೇ, ಏಳಿರಿ!
ನನ್ನ ದೇವರೇ, ನನ್ನನ್ನು ರಕ್ಷಿಸಿರಿ.
ನನ್ನ ಶತ್ರುಗಳೆಲ್ಲರ ದವಡೆಗೆ ಹೊಡೆಯಿರಿ;
ದುಷ್ಟರ ಹಲ್ಲುಗಳನ್ನು ಮುರಿದುಬಿಡಿರಿ.
ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು.
ನಿಮ್ಮ ಜನರ ಮೇಲೆ ನಿಮ್ಮ ಆಶೀರ್ವಾದವಿರಲಿ.
Source notes (1)
- Footnote ತಲೆ ಮೇಲೆತ್ತುವವರೂ ಇದರ ಅರ್ಥ ನೀವು ಜಯವನ್ನೂ ಮಹಾ ಘನತೆಯನ್ನೂ ಕೊಡುವವರಾಗಿದ್ದೀರಿ
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.