Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 5

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೊಳಲು ವಾದ್ಯದೊಡನೆ ಹಾಡತಕ್ಕದ್ದು, ದಾವೀದನ ಕೀರ್ತನೆ.

ಯೆಹೋವ ದೇವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ,

ನನ್ನ ಪ್ರಲಾಪವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.

ನನ್ನ ಅರಸರೇ, ನನ್ನ ದೇವರೇ,

ಸಹಾಯಕ್ಕಾಗಿರುವ ನನ್ನ ಮೊರೆಯನ್ನು ಕೇಳಿರಿ,

ನಿಮಗೇ ನಾನು ಪ್ರಾರ್ಥಿಸುತ್ತೇನೆ.

ಯೆಹೋವ ದೇವರೇ, ಉದಯಕಾಲದಲ್ಲಿ ನನ್ನ ಸ್ವರವನ್ನು ಕೇಳಿರಿ;

ಮುಂಜಾನೆಯಲ್ಲಿ ನಾನು ನನ್ನ ಬೇಡಿಕೆಗಳನ್ನು ನಿಮ್ಮ ಮುಂದೆ ಸಮರ್ಪಿಸಿ,

ಎದುರುನೋಡುತ್ತಾ ಕಾದುಕೊಂಡಿರುವೆನು.

ನೀವು ದುಷ್ಟತನವನ್ನು ಮೆಚ್ಚುವ ದೇವರಲ್ಲ;

ಕೆಡುಕರು ನಿಮ್ಮ ಬಳಿಯಲ್ಲಿ ವಾಸಿಸುವುದಿಲ್ಲ.

ನಿಮ್ಮ ಸನ್ನಿಧಿಯಲ್ಲಿ

ಗರ್ವಿಗಳು ನಿಂತುಕೊಳ್ಳಲಾರರು.

ಅಧರ್ಮ ಮಾಡುವವರೆಲ್ಲರನ್ನು ನೀವು ದ್ವೇಷಿಸುತ್ತೀರಿ.

ಸುಳ್ಳಾಡುವವರನ್ನು ನೀವು ದಂಡಿಸುತ್ತೀರಿ.

ಕೊಲೆಗಾರರನ್ನೂ ಮೋಸಗಾರರನ್ನೂ

ಯೆಹೋವ ದೇವರು ಅಸಹ್ಯಪಡುತ್ತಾರೆ.

ನಾನಾದರೋ, ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ

ನಿಮ್ಮ ಮನೆಗೆ ಬರುವೆನು;

ಭಕ್ತಿಭಾವದಿಂದ ನಿಮ್ಮ ಪರಿಶುದ್ಧ

ಆಲಯದ ಕಡೆಗೆ ತಲೆಬಾಗುವೆನು.

ಯೆಹೋವ ದೇವರೇ, ನನ್ನ ವಿರೋಧಿಗಳ ನಿಮಿತ್ತ

ನಿಮ್ಮ ನೀತಿಯಲ್ಲಿ ನನ್ನನ್ನು ನಡೆಸಿರಿ;

ನಿಮ್ಮ ಮಾರ್ಗವನ್ನು ನನ್ನ ಮುಂದೆ ನೇರವಾಗಿ ಮಾಡಿರಿ.

ಅವರ ಬಾಯಿಯಲ್ಲಿ ಯಥಾರ್ಥ ಮಾತು ಒಂದೂ ಇಲ್ಲ;

ಅವರ ಹೃದಯವು ನಾಶನದಿಂದ ತುಂಬಿದೆ.

ಅವರ ಗಂಟಲು ತೆರೆದ ಸಮಾಧಿಯೇ;

ತಮ್ಮ ನಾಲಿಗೆಯಿಂದ ಮುಖಸ್ತುತಿ ಮಾಡುತ್ತಾರೆ.

ಓ ದೇವರೇ! ಅವರನ್ನು ಅಪರಾಧಿಗಳೆಂದು ನಿರ್ಣಯಿಸಿರಿ,

ಅವರು ತಮ್ಮ ಸ್ವಂತ ಕುತಂತ್ರಗಳಿಂದ ಬಿದ್ದುಹೋಗಲಿ.

ಅವರ ಬಹು ಪಾಪಗಳ ನಿಮಿತ್ತ ಅವರನ್ನು ಬಹಿಷ್ಕರಿಸಿರಿ,

ಏಕೆಂದರೆ ಅವರು ನಿಮಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.

ಆದರೆ ನಿಮ್ಮನ್ನು ಆಶ್ರಯಿಸುವವರೆಲ್ಲರು ಆನಂದಿಸಲಿ;

ಅವರು ಸದಾ ನಿಮ್ಮ ಆನಂದ ಗಾನವನ್ನು ಹಾಡಲಿ.

ನಿಮ್ಮ ಹೆಸರನ್ನು ಪ್ರೀತಿಸುವವರು ನಿಮ್ಮಲ್ಲಿ ಆನಂದಿಸುವಂತೆ

ಅವರನ್ನು ನಿಮ್ಮ ಸಂರಕ್ಷಣೆಯಿಂದ ಆವರಿಸಿಕೊಳ್ಳಿರಿ.

ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ;

ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.