Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 12
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಶೆಮಿನಿಥ್ ಸ್ವರದೊಂದಿಗೆ ಹಾಡತಕ್ಕದ್ದು. ದಾವೀದನ ಕೀರ್ತನೆ.
ಯೆಹೋವ ದೇವರೇ, ರಕ್ಷಿಸಿರಿ, ಏಕೆಂದರೆ ದೇವಭಕ್ತರು ಮುಗಿದು ಹೋಗುತ್ತಿದ್ದಾರೆ;
ಜನರಲ್ಲಿ ನಂಬಿಗಸ್ತರು ಇಲ್ಲದೆ ಹೋಗುತ್ತಿದ್ದಾರೆ.
ಪ್ರತಿಯೊಬ್ಬರು ತಮ್ಮ ನೆರೆಯವರ ಸಂಗಡ ಸುಳ್ಳಾಡುತ್ತಾರೆ;
ಅವರು ತಮ್ಮ ತುಟಿಯಿಂದ ಹೊಗಳಿ,
ಹೃದಯದಲ್ಲಿ ವಂಚನೆಯನ್ನು ಮಾತನಾಡುತ್ತಾರೆ.
ಹೊಗಳಿಕೆಯ ಎಲ್ಲಾ ತುಟಿಗಳನ್ನೂ
ಗರ್ವ ಮಾತನಾಡುವ ಎಲ್ಲಾ ನಾಲಿಗೆಯನ್ನೂ ಯೆಹೋವ ದೇವರು ಮೌನವಾಗಿರಿಸಲಿ.
ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು;
ನಮ್ಮ ತುಟಿಗಳೇ ನಮಗೆ ಸಂರಕ್ಷಣೆ
ನಮ್ಮ ಮೇಲೆ ಒಡೆಯನು ಯಾರು?”
“ಬಡವರು ಹಿಂಸೆಗೆ ಒಳಗಾಗಿರುವುದರಿಂದಲೂ ಗತಿಯಿಲ್ಲದವರು
ನರಳಾಡುವುದರಿಂದಲೂ ನಾನು ಈಗಲೇ ಏಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
“ಪೀಡಿಸುವವರಿಂದ ನಾನು ಬಡವರನ್ನು ಕಾಪಾಡುವೆನು.”
ಯೆಹೋವ ದೇವರ ವಾಕ್ಯಗಳು ದೋಷವಿಲ್ಲದ್ದು.
ಅವು ಮಣ್ಣಿನ ಕುಲುಮೆಯಲ್ಲಿ ಶುದ್ಧೀಕರಿಸಿದ ಬೆಳ್ಳಿಯಂತೆಯೂ
ಏಳು ಸಾರಿ ಪುಟಕ್ಕೆ ಹಾಕಿದ ಬಂಗಾರದಂತೆಯೂ ಇವೆ.
ಯೆಹೋವ ದೇವರೇ, ನೀವು ಗತಿಯಿಲ್ಲದವರನ್ನು
ದುಷ್ಟರಿಂದ ಯಾವಾಗಲೂ ಕಾಪಾಡಿ ಸಂರಕ್ಷಿಸುತ್ತೀರಿ,
ಮನುಷ್ಯರು ಅಸಹ್ಯವಾದದ್ದನ್ನು ಗೌರವಿಸುವಾಗ,
ಆ ದುಷ್ಟರು ಎಲ್ಲಾ ಕಡೆಗಳಲ್ಲಿಯೂ ಸ್ವತಂತ್ರವಾಗಿ ಅಲೆದಾಡುತ್ತಿರುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.