Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 11
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
ಯೆಹೋವ ದೇವರಲ್ಲಿ ನಾನು ಆಶ್ರಯಿಸಿದ್ದೇನೆ.
ಹಾಗಾದರೆ, “ಒಂದು ಪಕ್ಷಿಯಂತೆ ನಿನ್ನ ಪರ್ವತಕ್ಕೆ ಹಾರಿ ಹೋಗು,”
ಎಂದು ನೀವು ನನಗೆ ಹೇಗೆ ಹೇಳುವಿರಿ?
“ಇಗೋ, ದುಷ್ಟರು ತಮ್ಮ ಬಿಲ್ಲು ಬಗ್ಗಿಸಿ;
ಬಾಣವನ್ನು ಬಿಲ್ಲಿಗೆ ಹೂಡಿ,
ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವುದಕ್ಕೆ ಸಿದ್ಧಮಾಡಿದ್ದಾರೆ.
ಅಸ್ತಿವಾರಗಳೇ ಕೆಡವುತ್ತಿರಲು,
ನೀತಿವಂತನು ಏನು ಮಾಡಲು ಸಾಧ್ಯ?”
ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ;
ಯೆಹೋವ ದೇವರು ತಮ್ಮ ಪರಲೋಕ ಸಿಂಹಾಸನದಲ್ಲಿ ಇದ್ದಾರೆ.
ಅವರು ಭೂಮಿಯಲ್ಲಿ ಪ್ರತಿಯೊಬ್ಬರನ್ನು ಗಮನಿಸುತ್ತಾರೆ;
ಅವರ ಕಣ್ಣುಗಳು ಮಾನವರೆಲ್ಲರನ್ನು ಪರಿಶೋಧಿಸುತ್ತವೆ.
ಯೆಹೋವ ದೇವರು ನೀತಿವಂತನನ್ನು ಪರೀಕ್ಷಿಸುತ್ತಾರೆ,
ಆದರೆ ಅವರು ದುಷ್ಟರನ್ನೂ ಹಿಂಸಾತ್ಮಕರನ್ನೂ ವಿರೋಧಿಸುತ್ತಾರೆ.
ಅವರು ದುಷ್ಟರ ಮೇಲೆ ಬೆಂಕಿಯನ್ನೂ
ಗಂಧಕವನ್ನೂ ಉರಿಗಾಳಿಯನ್ನೂ ಸುರಿಸಲಿ;
ಇವೇ ದುಷ್ಟರ ಪಾಲಾಗಿರಲಿ.
ಏಕೆಂದರೆ ಯೆಹೋವ ದೇವರು ನೀತಿಯುಳ್ಳವರು.
ಅವರು ನ್ಯಾಯವನ್ನು ಪ್ರೀತಿಸುತ್ತಾರೆ;
ಯಥಾರ್ಥರು ಅವರ ಮುಖವನ್ನು ದೃಷ್ಟಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.