Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 13
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
ಯೆಹೋವ ದೇವರೇ, ಎಷ್ಟರವರೆಗೆ ನನ್ನನ್ನು ಮರೆಯುವಿರಿ? ಎಂದೆಂದಿಗೂ ನನ್ನನ್ನು ಮರೆಯುವಿರೋ?
ಎಷ್ಟರವರೆಗೆ ನಿಮ್ಮ ಮುಖವನ್ನು ನನ್ನಿಂದ ಮರೆಮಾಡುವಿರಿ?
ಇನ್ನೆಷ್ಟರವರೆಗೆ ನನ್ನ ಆಲೋಚನೆಗಳೊಂದಿಗೆ ನಾನು ಹೋರಾಡುತ್ತಿರಬೇಕು?
ದಿನನಿತ್ಯವು ನಾನು ನನ್ನ ಹೃದಯದಲ್ಲಿ ನೊಂದಿರಬೇಕೆ?
ಇನ್ನೆಷ್ಟರವರೆಗೆ ನನ್ನ ಶತ್ರುವು ನನ್ನ ಮೇಲೆ ಜಯ ಹೊಂದಿರಬೇಕು?
ನನ್ನ ದೇವರಾದ ಯೆಹೋವ ದೇವರೇ, ನನ್ನನ್ನು ನೋಡಿ ನನಗೆ ಸದುತ್ತರ ಕೊಡಿರಿ.
ನನಗೆ ಮರಣ ನಿದ್ರೆ ಉಂಟಾಗದಂತೆ ನನ್ನ ಕಣ್ಣುಗಳನ್ನು ಬೆಳಗಿಸಿರಿ.
“ನಾನು ಅವನನ್ನು ಸೋಲಿಸಿದ್ದೇನೆ,” ಎಂದು ನನ್ನ ಶತ್ರು ಹೇಳದಿರಲಿ,
ನಾನು ಬೀಳುವಾಗ ನನ್ನ ಶತ್ರುಗಳು ಆನಂದಿಸದಿರಲಿ.
ನಾನಾದರೋ ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೇನೆ.
ನಿಮ್ಮ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾಸಪಡುವುದು.
ನಾನು ಯೆಹೋವ ದೇವರಿಗೆ ಸ್ತುತಿ ಹಾಡುವೆನು,
ಏಕೆಂದರೆ ಅವರು ನನಗೆ ಒಳ್ಳೆಯವರಾಗಿದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.