Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 111
ಯೆಹೋವ ದೇವರನ್ನು ಸ್ತುತಿಸಿರಿ.
ನಾನು ಯೆಹೋವ ದೇವರನ್ನು ಪೂರ್ಣಹೃದಯದಿಂದ
ಯಥಾರ್ಥರ ಕೂಟದಲ್ಲಿಯೂ, ಸಭೆಯಲ್ಲಿಯೂ ಕೊಂಡಾಡುವೆನು.
ಯೆಹೋವ ದೇವರ ಕೆಲಸಗಳು ದೊಡ್ಡವು;
ಅವುಗಳಲ್ಲಿ ಸಂತೋಷ ಪಡುವವರೆಲ್ಲರು ಅವುಗಳನ್ನೇ ಧ್ಯಾನಿಸುತ್ತಾರೆ.
ದೇವರ ಕೆಲಸವು ಘನತೆಯೂ, ಮಹಿಮೆಯೂ ಉಳ್ಳದ್ದು;
ದೇವರ ನೀತಿಯು ಎಂದೆಂದಿಗೂ ನಿಲ್ಲುವುದು.
ದೇವರು ತಮ್ಮ ಅದ್ಭುತಗಳ ಜ್ಞಾಪಕವನ್ನು ಉಳಿದಿರುವಂತೆ ಮಾಡಿದ್ದಾರೆ;
ಯೆಹೋವ ದೇವರು ಕೃಪೆಯೂ, ಅನುಕಂಪವೂ ಉಳ್ಳವರು.
ಅವರು ತಮಗೆ ಭಯಪಡುವವರಿಗೆ ಆಹಾರ ಕೊಟ್ಟಿದ್ದಾರೆ;
ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವರು.
ಜನಾಂಗಗಳ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ
ದೇವರು ಶಕ್ತಿಯ ಕ್ರಿಯೆಗಳನ್ನು ತಮ್ಮ ಜನರಿಗೆ ತಿಳಿಸಿದ್ದಾರೆ.
ದೇವರ ಕೈಕೆಲಸಗಳು ಸತ್ಯವೂ, ನ್ಯಾಯವೂ ಆಗಿವೆ;
ಅವರ ಸೂತ್ರಗಳೆಲ್ಲಾ ವಿಶ್ವಾಸಕ್ಕೆ ಯೋಗ್ಯವಾದವುಗಳು.
ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ;
ಅವು ಸತ್ಯದಲ್ಲಿಯೂ, ಯಥಾರ್ಥತೆಯಲ್ಲಿಯೂ ಒಳಗೊಂಡಿರುತ್ತದೆ.
ದೇವರು ತಮ್ಮ ಜನರಿಗೆ ವಿಮೋಚನೆಯನ್ನು ಕಳುಹಿಸಿದರು;
ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ;
ದೇವರ ಹೆಸರು ಪರಿಶುದ್ಧರು, ಅತಿಶಯರು ಎಂಬುದು.
ಯೆಹೋವ ದೇವರ ಭಯವು ಜ್ಞಾನದ ಮೂಲವು;
ಅವರ ಸೂತ್ರಗಳನ್ನು ಕೈಗೊಳ್ಳುವವರಿಗೆ ಒಳ್ಳೆಯ ತಿಳುವಳಿಕೆ ಉಂಟಾಗುವುದು;
ನಿತ್ಯ ಸ್ತೋತ್ರವು ದೇವರಿಗೆ ಸಲ್ಲಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.