Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 112
ಯೆಹೋವ ದೇವರನ್ನು ಸ್ತುತಿಸಿರಿ.
ಯೆಹೋವ ದೇವರಿಗೆ ಭಯಪಟ್ಟು ಅವರ ಆಜ್ಞೆಗಳಲ್ಲಿ ಬಹಳವಾಗಿ
ಸಂತೋಷಿಸುವವರು ಧನ್ಯರು.
ಅವರ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿಯಾಗಿರುವುದು;
ಯಥಾರ್ಥರ ಸಂತತಿಯು ಆಶೀರ್ವಾದ ಹೊಂದುವುದು.
ಧನವೂ, ಐಶ್ವರ್ಯವೂ ಅವರ ಮನೆಯಲ್ಲಿ ಇರುವುದು;
ಅವರ ನೀತಿಯು ಶಾಶ್ವತವಾಗಿ ಉಳಿಯುವುದು.
ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಮೂಡುವುದು;
ಅವರು ಕೃಪೆಯೂ, ಅನುಕಂಪವೂ, ನೀತಿಯೂ ಉಳ್ಳವವರಾಗಿರುವರು.
ದಯೆತೋರಿಸಿ ಸಾಲಕೊಡುವವರಿಗೆ, ಒಳ್ಳೆಯದಾಗುವುದು;
ಅವರು ತಮ್ಮ ಕಾರ್ಯಗಳನ್ನು ನ್ಯಾಯದಿಂದ ನಡೆಸುವರು.
ನಿಶ್ಚಯವಾಗಿ ನೀತಿವಂತರು ಎಂದೆಂದಿಗೂ ಕದಲರು;
ನೀತಿವಂತರು ನಿತ್ಯವಾಗಿ ಜ್ಞಾಪಕದಲ್ಲಿ ಇರುವರು.
ಅವರಿಗೆ ಅಶುಭದ ಸುದ್ದಿಯ ಭಯ ಇರುವುದಿಲ್ಲ;
ಅವರ ಹೃದಯವು ಯೆಹೋವ ದೇವರಲ್ಲಿ ಭರವಸವಿಟ್ಟು ಸ್ಥಿರವಾಗಿರುವುದು.
ಅವರ ಹೃದಯವು ಸುರಕ್ಷಿತವಾಗಿರುವುದು.
ಅವರು ತಮ್ಮ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವರು, ಭಯಪಡರು.
ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಡುವರು;
ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು;
ಅವನ ಬಲವು ಘನದಿಂದ ಉನ್ನತವಾಗುವುದು.
ದುಷ್ಟರು ಇದನ್ನು ಕಂಡು ವ್ಯಥೆ ಪಡುವರು;
ಅವರು ತಮ್ಮ ಹಲ್ಲು ಕಡಿದು ಮರೆಯಾಗಿ ಹೋಗುವರು;
ದುಷ್ಟರ ಆಶೆಯು ನಾಶವಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.