Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 65
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. ಒಂದು ಗೀತೆ.
ದೇವರೇ, ಚೀಯೋನಿನಲ್ಲಿ ನಿಮಗೋಸ್ಕರ ಸ್ತೋತ್ರವು ಕಾದಿದೆ.
ನಿಮಗೆ ನಮ್ಮ ಹರಕೆಗಳನ್ನು ಪೂರೈಸುವೆವು.
ಪ್ರಾರ್ಥನೆಯನ್ನು ಕೇಳುವವರೇ,
ಎಲ್ಲಾ ಜನರು ನಿಮ್ಮ ಬಳಿಗೆ ಬರುವರು.
ನಾವು ನಮ್ಮ ಪಾಪಗಳಿಂದ ತುಂಬಿಹೋಗಿರುವಾಗ
ನೀವೇ ನಮ್ಮ ದ್ರೋಹಗಳಿಗಾಗಿ ದೋಷಪರಿಹಾರಕರು.
ನೀವು ಆಯ್ದುಕೊಂಡು ನಿಮ್ಮ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು.
ಏಕೆಂದರೆ ನಿಮ್ಮ ಅಂಗಳಗಳಲ್ಲಿ ಅವನು ವಾಸವಾಗಿರುವನು.
ನಿಮ್ಮ ಪರಿಶುದ್ಧ ಮಂದಿರವಾದ
ನಿಮ್ಮ ಆಲಯದ ಒಳ್ಳೆಯ ಸಂಗತಿಗಳಿಂದ ನಮಗೆ ತೃಪ್ತಿಯಾಗಲಿ.
ಅತಿಶಯ ಹಾಗು ನೀತಿಯ ಕೃತ್ಯಗಳನ್ನು ನಡೆಸಿ,
ನೀವು ನಮಗೆ ಉತ್ತರ ಕೊಡುವಿರಿ.
ನಮ್ಮ ರಕ್ಷಣೆಯ ದೇವರೇ, ಭೂಮಿಯಲ್ಲಿರುವವರಿಗೂ,
ಸಮುದ್ರದ ಆಚೆ ದೂರವಾಗಿರುವವರಿಗೂ ನೀವು ಭರವಸೆಯಾಗಿದ್ದೀರಿ.
ಬೆಟ್ಟಗಳನ್ನು ನಿಮ್ಮ ಶಕ್ತಿಯಿಂದ ರೂಪಿಸಿದವರು ನೀವೇ.
ಜಲದಿಂದ ನಡು ಕಟ್ಟಿಕೊಂಡಿರುವವರೂ ನೀವೇ.
ಸಮುದ್ರಗಳ ಘೋಷವನ್ನೂ,
ಅವುಗಳ ತೆರೆಗಳ ಘೋಷವನ್ನೂ,
ಪ್ರಜೆಗಳ ಕೋಲಾಹಲವನ್ನೂ ಶಮನಗೊಳಿಸುವವರು ನೀವೇ.
ಇಡೀ ಭೂಮಿಯಲ್ಲಿರುವವರು ನಿಮ್ಮ ಅದ್ಭುತಕಾರ್ಯಗಳಿಗೆ ಅತಿಶಯಗೊಂಡಿದ್ದಾರೆ.
ಉದಯಾಸ್ತಮಾನಗಳಲ್ಲಿ ಇರುವವರನ್ನು
ಉತ್ಸಾಹ ಧ್ವನಿಗೈಯುವಂತೆ ಮಾಡುತ್ತೀರಿ.
ಭೂಮಿಯನ್ನು ಸಂಧಿಸಿ, ಅದಕ್ಕೆ ಮಳೆಬರುವಂತೆ,
ಅದನ್ನು ಫಲವತ್ತಾಗಿ ಮಾಡುತ್ತೀರಿ.
ದೇವರ ನದಿಯು ನೀರಿನಿಂದ ತುಂಬಿದೆ.
ಹೀಗೆ ಭೂಮಿಯನ್ನು ಸಿದ್ಧಮಾಡಿ,
ಜನರಿಗೆ ನೀವು ಧಾನ್ಯವನ್ನು ಒದಗಿಸುತ್ತೀರಿ.
ನೇಗಿಲ ಸಾಲುಗಳನ್ನು ಸಮಮಾಡುತ್ತೀರಿ.
ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀರಿ, ಅದರ ಮೊಳಕೆಯನ್ನು ಆಶೀರ್ವದಿಸುತ್ತೀರಿ.
ವರ್ಷಕ್ಕೆ ನಿಮ್ಮ ಉದಾರತೆಯ ಕಿರೀಟವನ್ನು ಇಡುತ್ತೀರಿ.
ನಿಮ್ಮ ಹಾದಿಗಳು ಸಮೃದ್ಧಿಯಿಂದ ತುಂಬಿ ಪ್ರವಾಹಿಸುತ್ತಿದೆ.
ಮರುಭೂಮಿಯ ಹುಲ್ಲುಗಾವಲಲ್ಲಿ ವೃಷ್ಟಿಯಾಗಿದೆ.
ಗುಡ್ಡಗಳು ಉಲ್ಲಾಸವನ್ನು ಧರಿಸಿಕೊಂಡಿವೆ.
ಹುಲ್ಲುಗಾವಲುಗಳು ಮಂದೆಗಳಿಂದ ಹೊದಿಕೆಯಾಗಿವೆ.
ಕಣಿವೆಗಳು ಸಹ ಧಾನ್ಯದಿಂದ ಮುಚ್ಚಿರುತ್ತವೆ.
ಅವು ಉತ್ಸಾಹಗೊಂಡು ಹಾಡುತ್ತವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.