Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 64
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
ದೇವರೇ, ನನ್ನ ದೂರುಗಳನ್ನು ನಿಮ್ಮ ಮುಂದಿಡುವಾಗ ನನ್ನ ಬಿನ್ನಹವನ್ನು ಕೇಳಿರಿ.
ಶತ್ರುವಿನ ಹೆದರಿಕೆಯಿಂದ ನನ್ನ ಜೀವವನ್ನು ಕಾಪಾಡಿರಿ.
ದುರ್ಮಾರ್ಗಿಗಳ ಗುಪ್ತ ಆಲೋಚನೆಗಳಿಗೂ,
ದುಷ್ಟರ ಒಳಸಂಚಿಗೂ ನನ್ನನ್ನು ಮರೆಮಾಡಿರಿ.
ಅವರು ತಮ್ಮ ನಾಲಿಗೆಯನ್ನು
ಖಡ್ಗದಂತೆ ಮಸೆಯುತ್ತಾರೆ.
ನಿರ್ದೋಷಿಯ ಕಡೆಗೆ ಕಹಿಮಾತುಗಳನ್ನು ಬಾಣದಂತೆ ಗುರಿಯಿಟ್ಟಿದ್ದಾರೆ.
ಅಂಜದೆ ಫಕ್ಕನೆ ಅವನ ಕಡೆಗೆ ಎಸೆಯುತ್ತಾರೆ.
ತಮ್ಮೊಳಗೆ ಕೇಡನ್ನು ಪ್ರೋತ್ಸಾಹ ಮಾಡುತ್ತಾರೆ.
ರಹಸ್ಯವಾಗಿ ಬಲೆಗಳನ್ನು ಒಡ್ಡುವುದಕ್ಕೆ ಮಾತನಾಡುತ್ತಾ,
“ನಮ್ಮನ್ನು ಕಾಣುವವರು ಯಾರು?” ಎಂದುಕೊಳ್ಳುತ್ತಾರೆ.
ಅವರು ಅನ್ಯಾಯಗಳನ್ನು ಕಲ್ಪಿಸಿ,
“ನಾವು ಒಳ್ಳೇ ಉಪಾಯವನ್ನು ಮಾಡಿದ್ದೇವೆ,” ಅಂದುಕೊಳ್ಳುತ್ತಾರೆ.
ನಿಶ್ಚಯವಾಗಿ ಮಾನವರ ಆಂತರ್ಯವೂ ಹೃದಯವೂ ಕುಯುಕ್ತಿಯಿಂದ ಕೂಡಿದೆ.
ಆದರೆ ದೇವರು ಅವರ ಬಾಣದಿಂದಲೇ,
ಫಕ್ಕನೆ ಅವರಿಗೆ ಗಾಯಗಳಾಗುವಂತೆ ಅನುಮತಿಸುವರು.
ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ
ಬೀಳುವಂತೆ ಮಾಡಿಕೊಳ್ಳುವರು.
ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು.
ಎಲ್ಲಾ ಮನುಷ್ಯರೂ ಭಯಪಟ್ಟು
ದೇವರ ಕಾರ್ಯಗಳನ್ನು ಸಾರುವರು.
ದೇವರು ಮಾಡಿದವುಗಳನ್ನು ಆಲೋಚಿಸಿಕೊಳ್ಳುವರು.
ನೀತಿವಂತರು ಯೆಹೋವ ದೇವರಲ್ಲಿ ಆನಂದಪಟ್ಟು
ದೇವರನ್ನೇ ಆಶ್ರಯಿಸಿಕೊಳ್ಳುವರು.
ಸರಳ ಹೃದಯದವರೆಲ್ಲರೂ ದೇವರನ್ನು ಮಹಿಮೆಪಡಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.