Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 55

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಮಸ್ಕಿಲ್ ರಾಗದಲ್ಲಿ ದಾವೀದನು ರಚಿಸಿದ ಕೀರ್ತನೆ.

ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ,

ನನ್ನ ವಿಜ್ಞಾಪನೆಗೆ ನಿಮ್ಮನ್ನು ಮರೆಮಾಡಿಕೊಳ್ಳಬೇಡಿರಿ.

ನನ್ನನ್ನು ಆಲೈಸಿರಿ, ನನಗೆ ಉತ್ತರಕೊಡಿರಿ.

ನಾನು ನನ್ನ ಚಿಂತೆಯಿಂದ ದುಃಖಿಸುತ್ತಾ ಬೇಸರವಾಗಿದ್ದೇನೆ.

ಶತ್ರುವಿನ ಗರ್ಜನೆಯಿಂದಲೂ

ದುಷ್ಟರ ಬೆದರಿಕೆಯಿಂದಲೂ ನರಳುತ್ತೇನೆ.

ಏಕೆಂದರೆ ಅವರು ಅಪರಾಧವನ್ನು ನನ್ನ ಮೇಲೆ ಬರಮಾಡಿ,

ಕೋಪದಿಂದ ನನ್ನನ್ನು ಹಗೆ ಮಾಡುತ್ತಾರೆ.

ನನ್ನ ಹೃದಯವು ನನ್ನ ಅಂತರಂಗದಲ್ಲಿ ನೊಂದುಕೊಳ್ಳುತ್ತದೆ.

ಮರಣದ ಬೆದರಿಕೆಗಳು ನನ್ನ ಮೇಲೆ ಬಿದ್ದಿವೆ.

ಭಯವೂ ನಡುಗೂ ನನಗೆ ಬಂದಿವೆ;

ಭೀತಿಯು ನನ್ನನ್ನು ಮುಚ್ಚಿದೆ.

“ಓ, ಪಾರಿವಾಳದಂತೆ ನನಗೆ ರೆಕ್ಕೆಗಳು ಇರುತ್ತಿದ್ದರೆ,

ಹಾರಿಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆ.

ನಾನು ದೂರ ಹಾರಿಹೋಗಿ

ಮರುಭೂಮಿಯಲ್ಲಿ ವಾಸಿಸುತ್ತಿದ್ದೆ.

ಚಂಡಮಾರುತದಿಂದಲೂ ಬಿರುಗಾಳಿಯಿಂದಲೂ

ತಪ್ಪಿಸಿಕೊಳ್ಳುತ್ತಿದ್ದೆ,” ಎಂದುಕೊಂಡೆನು.

ಯೆಹೋವ ದೇವರೇ, ದುಷ್ಟರನ್ನು ಕಳವಳಗೊಳಿಸಿರಿ, ಅವರ ಮಾತುಗಳನ್ನು ನಿಲ್ಲಿಸಿಬಿಡಿರಿ.

ಬಲಾತ್ಕಾರವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ಕಾಣುತ್ತಿದ್ದೇನೆ.

ಅವರು ಹಗಲಿರುಳು ಪಟ್ಟಣದ ಗೋಡೆಗಳನ್ನು ಸುತ್ತುತ್ತಾರೆ.

ಕೇಡು ಅನಾಚಾರಗಳು ಅದರ ಮಧ್ಯದಲ್ಲಿ ಇವೆ.

ನಾಶಕರ ಶಕ್ತಿಗಳು ನಗರ ಮಧ್ಯದಲ್ಲಿ ಇವೆ.

ಬೀದಿಗಳೊಳಗಿಂದ ಬೆದರಿಕೆಯೂ ವಂಚನೆಯೂ ತೊಲಗುವುದಿಲ್ಲ.

ನನ್ನನ್ನು ನಿಂದಿಸುವವನು ಶತ್ರುವಲ್ಲ,

ಶತ್ರುವಾದರೆ ತಾಳಿಕೊಳ್ಳುತ್ತಿದ್ದೆ.

ನನಗೆ ವಿರೋಧವಾಗಿರುವವನು ನನ್ನ ವೈರಿಯಾಗಿದ್ದರೆ,

ಅವನಿಂದ ಅಡಗಿಕೊಳ್ಳುತ್ತಿದ್ದೆನು.

ಆದರೆ ನನ್ನ ಜೊತೆಗಾರನೂ ನನ್ನ ಆಪ್ತನೂ,

ನನಗೆ ಸಮನಾದವನೇ ವಿರೋಧವಾಗಿದ್ದಾನೆ.

ದೇವರ ಆಲಯಕ್ಕೆ ಆರಾಧಕರ

ಗುಂಪಿನೊಂದಿಗೆ ನಾವಿಬ್ಬರೂ

ನಡೆದು ಹೋಗುವಾಗ

ಮಧುರ ಅನ್ಯೋನ್ಯತೆಯನ್ನು ಅನುಭವಿಸಿದೆವು.

ಮರಣ ನನ್ನ ವೈರಿಗಳನ್ನು ತಟ್ಟನೆ ಹಿಡಿಯಲಿ.

ಜೀವಸಹಿತ ಪಾತಾಳಕ್ಕೆ ಅವರು ಇಳಿಯಲಿ,

ಅವರ ಮನೆಯಲ್ಲಿ ದುಷ್ಟತನವು ಇದೆ.

ಆದರೆ ನಾನು ದೇವರನ್ನು ಕರೆಯುವೆನು.

ಯೆಹೋವ ದೇವರು ನನ್ನನ್ನು ರಕ್ಷಿಸುವರು.

ಸಂಜೆ, ಮುಂಜಾನೆ, ಮಧ್ಯಾಹ್ನಗಳಲ್ಲಿ

ಹಂಬಲಿಸಿ ಮೊರೆಯಿಡುವೆನು.

ದೇವರು ನನ್ನ ಧ್ವನಿಯನ್ನು ಕೇಳುವರು.

ಅನೇಕರು ನನ್ನನ್ನು ವಿರೋಧಿಸಿದರೂ

ನನಗೆ ವಿರೋಧವಾಗಿ ಆಗುವ ಯುದ್ಧಗಳಲ್ಲಿ

ದೇವರು ನನ್ನನ್ನು ಯಾವುದೇ ಹಾನಿಯಾಗದಂತೆ ವಿಮೋಚಿಸುವರು.

ಆದಿಯಿಂದ ಸಿಂಹಾಸನಾರೂಢರಾಗಿರುವ ದೇವರು,

ಅವರ ಮೊರೆಯನ್ನು ಕೇಳಿ ಅವರನ್ನು ತಗ್ಗಿಸುವರು,

ಏಕೆಂದರೆ, ಅವರು ದೇವರಿಗೆ ಭಯಪಡುವುದಿಲ್ಲ.

ದೇವರು ಬದಲಾಗುವುದಿಲ್ಲ.

ನನ್ನ ಜೊತೆಗಾರನು ತನ್ನ ಸ್ನೇಹಿತನ ಮೇಲೆ ದಾಳಿಮಾಡಿದ್ದಾನೆ.

ತಾನು ಮಾಡಿದ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

ಅವನ ಬಾಯಿಯ ಮಾತುಗಳು ಬೆಣ್ಣೆಗಿಂತ ನುಣ್ಣಗಾಗಿವೆ;

ಆದರೆ ಅವನ ಹೃದಯದಲ್ಲಿ ಕಾಳಗವಿದೆ;

ಅವನ ಮಾತುಗಳು ಎಣ್ಣೆಗಿಂತ ನಯವಾಗಿವೆ;

ಆದರೆ ಅವು ಬಿಚ್ಚುಗತ್ತಿಗಳಾಗಿವೆ.

ಯೆಹೋವ ದೇವರ ಮೇಲೆ ನಿಮ್ಮ ಭಾರವನ್ನು ಹಾಕಿರಿ.

ಅವರು ನಿಮಗೆ ಆಧಾರವಾಗಿರುವರು.

ದೇವರು ಎಂದೆಂದಿಗೂ

ನೀತಿವಂತನನ್ನು ಕದಲಗೊಡಿಸುವುದಿಲ್ಲ.

ಆದರೆ ದೇವರೇ, ದುಷ್ಟರನ್ನು ನಾಶದ

ಕುಣಿಯಲ್ಲಿ ಇಳಿಯ ಮಾಡುವಿರಿ.

ಕೊಲೆಪಾತಕರೂ ಮೋಸಗಾರರೂ

ತಮ್ಮ ಆಯುಷ್ಕಾಲದಲ್ಲಿ ಅರ್ಧವನ್ನೂ ಜೀವಿಸುವುದಿಲ್ಲ.

ನಾನಾದರೋ ನಿಮ್ಮಲ್ಲಿ ಭರವಸವಿಡುತ್ತೇನೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.