Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 48
ಒಂದು ಗೀತೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ.
ಯೆಹೋವ ದೇವರು ಮಹೋನ್ನತರೂ ನಮ್ಮ ದೇವರು ತಮ್ಮ ಪರಿಶುದ್ಧ ಪರ್ವತ ಪಟ್ಟಣದಲ್ಲಿ
ಬಹಳವಾಗಿ ಸ್ತುತಿಗೆ ಪಾತ್ರರಾಗಿದ್ದಾರೆ.
ಉತ್ತರ ದಿಕ್ಕಿನಲ್ಲಿರುವ
ಮಹಾರಾಜರ ಪಟ್ಟಣವಾದ
ಚೀಯೋನ್ ಪರ್ವತವು ಸುಂದರವಾಗಿ ಚಾಪೋನಿನ ಶಿಖರದಂತೆ
ಇಡೀ ಭೂಮಿಗೆ ಸಂತೋಷಕರವಾದದ್ದಾಗಿದೆ.
ದೇವರು ಅದರ ಅರಮನೆಗಳಲ್ಲಿ ವಾಸಿಸುತ್ತಾರೆ.
ದೇವರು ತಾವೇ ಅದರ ಭದ್ರಕೋಟೆಯಾಗಿದ್ದಾರೆ.
ಏಕೆಂದರೆ, ಇಗೋ, ಅರಸರು ಕೂಡಿಬಂದರು.
ಅವರು ಒಟ್ಟಾಗಿ ದಾಳಿಮಾಡಲು ಬಂದರು.
ಅವರು ಪಟ್ಟಣವನ್ನು ಕಂಡು, ಬೆರಗಾದರು.
ಅವರು ಭಯಪಟ್ಟು ಓಡಿಹೋದರು.
ಅಲ್ಲಿ ನಡುಕವವೂ ಹೆರುವವಳ ಹಾಗೆ
ನೋವೂ ಅವರನ್ನು ಹಿಡಿಯಿತು.
ಪೂರ್ವದಿಕ್ಕಿನ ಗಾಳಿಯಿಂದ ತಾರ್ಷೀಷ್
ಹಡಗುಗಳನ್ನು ನೀವು ಒಡೆಯುತ್ತೀರಲ್ಲಾ.
ನಾವು ಹೇಗೆ ಕೇಳಿದೆವೋ
ಹಾಗೆಯೇ ಕಣ್ಣಾರೆ ಕಂಡೆವು,
ಸೇನಾಧೀಶ್ವರ ಯೆಹೋವ ದೇವರ ಪಟ್ಟಣವಾಗಿರುವ,
ನಮ್ಮ ದೇವರ ಪಟ್ಟಣದಲ್ಲಿ ಇದನ್ನು ಕಂಡೆವು:
ದೇವರು ಪಟ್ಟಣವನ್ನು
ಎಂದೆಂದಿಗೂ ಸ್ಥಿರಪಡಿಸುವರು.
ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು
ನಿಮ್ಮ ಮಂದಿರದಲ್ಲಿ ನಾವು ಸ್ಮರಿಸುತ್ತೇವೆ.
ದೇವರೇ, ನಿಮ್ಮ ಹೆಸರಿಗೆ ತಕ್ಕಂತೆಯೇ
ನಿಮ್ಮ ಸ್ತೋತ್ರವು ಭೂಮಿಯ ಕಟ್ಟಕಡೆಯವರೆಗೂ ಇದೆ;
ನಿಮ್ಮ ಬಲಗೈ ನೀತಿಯಿಂದ ತುಂಬಿದೆ.
ನಿಮ್ಮ ನ್ಯಾಯ ನಿರ್ಣಯಗಳ ನಿಮಿತ್ತ
ಚೀಯೋನ್ ಪರ್ವತವು ಸಂತೋಷಪಡಲಿ;
ಯೆಹೂದ ಪುತ್ರಿಯರು ಉಲ್ಲಾಸಪಡಲಿ.
ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ
ಅದರ ಗೋಪುರಗಳನ್ನು ಎಣಿಸಿರಿ.
ಮುಂದಿನ ತಲಾಂತರಕ್ಕೆ ತಿಳಿಸುವುದಕ್ಕೋಸ್ಕರ
ಅದರ ಗೋಪುರಗಳನ್ನು
ಕಣ್ಣಿಟ್ಟು ನೋಡಿರಿ,
ಅದರ ಅರಮನೆಗಳನ್ನು ಲಕ್ಷಿಸಿರಿ.
ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ;
ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.