Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 47
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಗೀತೆ.
ಎಲ್ಲಾ ಜನರೇ, ಕೈ ತಟ್ಟಿರಿ;
ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ.
ಏಕೆಂದರೆ ಮಹೋನ್ನತರಾದ ಯೆಹೋವ ದೇವರು ಭಯಭಕ್ತಿಗೆ ಪಾತ್ರರೂ
ಭೂಮಿಯ ಮೇಲೆಲ್ಲಾ ಮಹಾರಾಜರೂ ಆಗಿದ್ದಾರೆ.
ಜನರನ್ನು ನಮ್ಮ ಕೆಳಗೆ ತಂದಿದ್ದಾರೆ.
ಜನಾಂಗಗಳನ್ನು ನಮಗೆ ಅಧೀನಮಾಡಿದ್ದಾರೆ.
ಅವರು ಪ್ರೀತಿಸುವ ಯಾಕೋಬಿನ ಘನತೆಯಾಗಿರುವ
ನಮ್ಮ ಬಾಧ್ಯತೆಯನ್ನು ನಮಗಾಗಿ ಆಯ್ದುಕೊಂಡಿದ್ದಾರೆ.
ದೇವರು ಜಯಘೋಷದಿಂದ ಉನ್ನತರಾಗಿದ್ದಾರೆ.
ಯೆಹೋವ ದೇವರು ತುತೂರಿಯ ಧ್ವನಿಯೊಡನೆ ಸಾಗಿದ್ದಾರೆ.
ದೇವರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ;
ನಮ್ಮ ರಾಜರಿಗೆ ಸ್ತುತಿಯನ್ನು ಹಾಡಿರಿ, ಸ್ತುತಿಯನ್ನು ಹಾಡಿರಿ.
ಏಕೆಂದರೆ, ದೇವರು ಭೂಮಿಗೆಲ್ಲಾ ಮಹಾರಾಜರು.
ದೇವರನ್ನು ಸ್ತೋತ್ರದ ಕೀರ್ತನೆಯಿಂದ ಕೀರ್ತಿಸಿರಿ.
ದೇವರು ಜನಾಂಗಗಳನ್ನು ಆಳುತ್ತಾರೆ.
ದೇವರು ತಮ್ಮ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾರೆ.
ರಾಷ್ಟ್ರಗಳ ಅಧಿಪತಿಗಳು
ಅಬ್ರಹಾಮನ ದೇವರ ಜನರಾಗಿ ಕೂಡಿಬಂದಿದ್ದಾರೆ.
ಏಕೆಂದರೆ, ಭೂಮಿಯ ರಾಜರೆಲ್ಲರೂ ದೇವರಿಗೆ ಸೇರಿದವರು.
ದೇವರು ಬಹಳವಾಗಿ ಘನ ಹೊಂದಿದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.