Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 20
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
ಯೆಹೋವ ದೇವರು ಇಕ್ಕಟ್ಟಿನಲ್ಲಿ ನಿಮಗೆ ಉತ್ತರವನ್ನು ನೀಡಲಿ;
ಯಾಕೋಬನ ದೇವರ ಹೆಸರು ನಿಮ್ಮನ್ನು ಕಾಪಾಡಲಿ.
ದೇವರು ಪರಿಶುದ್ಧ ಸ್ಥಳದೊಳಗಿಂದ ನಿಮಗೆ ಸಹಾಯ ಕಳುಹಿಸಲಿ;
ಅವರು ಚೀಯೋನಿನಿಂದ ನಿಮಗೆ ಆಧಾರ ನೀಡಲಿ.
ನಿಮ್ಮ ಯಜ್ಞಾರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿಕೊಂಡು,
ನಿಮ್ಮ ದಹನಬಲಿಗಳನ್ನು ಸ್ವೀಕರಿಸಲಿ.
ದೇವರು ನಿಮ್ಮ ಹೃದಯದ ಬಯಕೆಯನ್ನು ನಿಮಗೆ ದಯಪಾಲಿಸಲಿ;
ನಿಮ್ಮ ಎಲ್ಲಾ ಯೋಜನೆಗಳಲ್ಲಿಯೂ ಯಶಸ್ಸನ್ನು ನೀಡಲಿ.
ನಾವು ದೇವರ ಜಯದಲ್ಲಿ ಆನಂದ ಘೋಷಮಾಡಿ,
ನಮ್ಮ ದೇವರ ಹೆಸರಿನಲ್ಲಿಯೇ ನಾವು ನಮ್ಮ ಧ್ವಜಗಳನ್ನು ಎತ್ತುವೆವು.
ಯೆಹೋವ ದೇವರು ನಿಮ್ಮ ಬಿನ್ನಹಗಳನ್ನೆಲ್ಲಾ ಪೂರೈಸಲಿ.
ಈಗ ನಾನು ಇದನ್ನು ಬಲ್ಲೆನು:
ಯೆಹೋವ ದೇವರು ತಮ್ಮ ಅಭಿಷಿಕ್ತನಿಗೆ ಜಯ ನೀಡುವರು.
ತಮ್ಮ ಜಯದ ಬಲಗೈಯ ಶಕ್ತಿಯಿಂದಲೂ
ತಮ್ಮ ಪರಿಶುದ್ಧ ಪರಲೋಕದಿಂದಲೂ ಅವನಿಗೆ ಉತ್ತರಕೊಡುವರು.
ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳಲ್ಲಿಯೂ ಭರವಸೆಯಿಡುತ್ತಾರೆ;
ನಾವಾದರೋ ನಮ್ಮ ಯೆಹೋವ ದೇವರ ಹೆಸರಿನಲ್ಲಿ ಭರವಸೆಯನ್ನಿಡುತ್ತೇವೆ.
ಅವರು ಬಗ್ಗಿ ಬೀಳುತ್ತಾರೆ,
ನಾವಾದರೋ ಎದ್ದು ಸ್ಥಿರವಾಗಿ ನಿಲ್ಲುವೆವು.
ಯೆಹೋವ ದೇವರೇ, ಅರಸನಿಗೆ ಜಯಕೊಡಿರಿ!
ನಾವು ಕರೆಯುವಾಗ ನಮಗೆ ಉತ್ತರಕೊಡಿರಿ!
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.