Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 19

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.

ಆಕಾಶವು ದೇವರ ಮಹಿಮೆಯನ್ನು ಸಾರುತ್ತದೆ;

ಅಂತರಿಕ್ಷವು ಅವರ ಕೈಕೆಲಸವನ್ನು ಘೋಷಿಸುತ್ತದೆ.

ಹಗಲೆಲ್ಲಾ ಅವು ಮಾತನಾಡುತ್ತವೆ;

ರಾತ್ರಿಯೆಲ್ಲಾ ಅವು ಅರಿವನ್ನು ಪ್ರಕಟಿಸುತ್ತವೆ.

ಅವುಗಳಿಗೆ ಮಾತೂ ಇಲ್ಲ, ಪದವೂ ಇಲ್ಲ,

ಅವುಗಳ ಸ್ವರವು ಕೇಳುವುದೂ ಇಲ್ಲ.

ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ;

ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ;

ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.

ಸೂರ್ಯನು ಮದುಮಗನಂತೆ ತನ್ನ ಕೊಠಡಿಯಿಂದ ಹೊರಟುಬಂದು,

ಪಂದ್ಯಕ್ಕೆ ಹರ್ಷದಿಂದ ಓಡುವ ಪರಾಕ್ರಮಶಾಲಿಯಂತೆ ಇದ್ದಾನೆ.

ಆಕಾಶದ ಒಂದು ಕಡೆಯಿಂದ ಉದಯಿಸಿ

ಮತ್ತೊಂದು ಕಡೆಯವರೆಗೆ ಹೊರಟು ಪ್ರಯಾಣಿಸುತ್ತಾನೆ;

ಅದರ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.

ಯೆಹೋವ ದೇವರ ನಿಯಮವು ಸಂಪೂರ್ಣವಾಗಿದ್ದು,

ಪ್ರಾಣಕ್ಕೆ ಜೀವಕರವಾಗಿದೆ;

ಯೆಹೋವ ದೇವರ ಶಾಸನಗಳು ವಿಶ್ವಾಸಪಾತ್ರವಾಗಿದ್ದು,

ಮುಗ್ಧನನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ.

ಯೆಹೋವ ದೇವರ ಸೂತ್ರಗಳು ನೀತಿಯುಳ್ಳವುಗಳಾಗಿದ್ದು

ಅವು ಹೃದಯಕ್ಕೆ ಆನಂದಕರವಾಗಿವೆ;

ಯೆಹೋವ ದೇವರ ಆಜ್ಞೆಗಳು ಸ್ಪಷ್ಟವಾಗಿದ್ದು,

ಕಣ್ಣುಗಳಿಗೆ ಪ್ರಕಾಶಕರವಾಗಿವೆ.

ಯೆಹೋವ ದೇವರ ಭಯವು ಶುದ್ಧವಾಗಿದ್ದು,

ಎಂದೆಂದಿಗೂ ಶಾಶ್ವತವಾಗಿದೆ.

ಯೆಹೋವ ದೇವರ ತೀರ್ಪುಗಳು ಸತ್ಯವಾಗಿದ್ದು,

ಅವೆಲ್ಲವೂ ನೀತಿಯುಳ್ಳದ್ದಾಗಿವೆ.

ಅವು ಬಂಗಾರಕ್ಕಿಂತಲೂ,

ಅಪರಂಜಿಗಿಂತಲೂ ಅಮೂಲ್ಯವಾಗಿವೆ;

ಅವು ಜೇನಿಗಿಂತಲೂ,

ಅಪ್ಪಟ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.

ನಿಮ್ಮ ಸೇವಕನು ಅವುಗಳಿಂದ ಎಚ್ಚರಿಕೆ ಪಡೆಯುತ್ತಾನೆ;

ಅವುಗಳನ್ನು ಕೈಗೊಳ್ಳುವುದರಲ್ಲಿ ದೊಡ್ಡ ಪ್ರತಿಫಲವುಂಟು.

ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಯಾರಿಗೆ ಸಾಧ್ಯ?

ನನ್ನ ಗುಪ್ತ ಪಾಪಗಳನ್ನು ಕ್ಷಮಿಸು.

ಬೇಕುಬೇಕೆಂದು ಪಾಪಮಾಡದಂತೆ ನಿಮ್ಮ ಸೇವಕನನ್ನು ಕಾಪಾಡು;

ಅಂಥ ಪಾಪಗಳು ನನ್ನ ಮೇಲೆ ಆಳಿಕೆ ಮಾಡದಿರಲಿ.

ಆಗ ನಾನು ತಪ್ಪಿಲ್ಲದವನಾಗಿ,

ಮಹಾಪರಾಧದಿಂದ ಬಿಡುಗಡೆಯಾಗಿರುವೆನು.

ಯೆಹೋವ ದೇವರೇ, ನನ್ನ ಬಂಡೆಯೇ, ನನ್ನ ವಿಮೋಚಕರೇ,

ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ

ನಿಮ್ಮ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.