Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 141
ದಾವೀದನ ಕೀರ್ತನೆ.
ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ, ನನ್ನ ಬಳಿಗೆ ಬರಲು ತ್ವರೆಪಡಿರಿ.
ನಾನು ನಿಮ್ಮನ್ನು ಕರೆಯುವಾಗ, ನನಗೆ ಕಿವಿಗೊಡಿರಿ.
ನನ್ನ ಪ್ರಾರ್ಥನೆ ನಿಮ್ಮ ಮುಂದೆ ಧೂಪವಾಗಿರಲಿ,
ನಾನು ನಿಮ್ಮ ಕಡೆ ಕೈ ಎತ್ತುವುದು ಸಾಯಂಕಾಲದ ಬಲಿಯಂತೆ ನಿಮಗೆ ಸಮರ್ಪಕವಾಗಿರಲಿ.
ಯೆಹೋವ ದೇವರೇ, ನನ್ನ ಬಾಯಿಗೆ ಕಾವಲಿಡಿರಿ;
ನನ್ನ ತುಟಿಗಳ ಕದವನ್ನು ಕಾಯಿರಿ;
ಅಪರಾಧ ಮಾಡುವವರ ಸಂಗಡ ನಾನು ಸಹ ಸೇರಿಕೊಂಡು
ಕೆಟ್ಟ ಕಾರ್ಯಗಳನ್ನು ಮಾಡಲು
ನನ್ನ ಹೃದಯ ಸೆಳೆಯದಂತೆ ಕಾಪಾಡಿರಿ;
ಅವರ ಸವಿ ಊಟಗಳನ್ನು ನಾನು ಉಣ್ಣದಿರಲಿ.
ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ.
ಅವರು ನನ್ನನ್ನು ಗದರಿಸಲಿ, ಅದು ನನ್ನ ತಲೆಗೆ ಅಭಿಷೇಕ;
ನನ್ನ ತಲೆ ಅದನ್ನು ಬೇಡವೆನ್ನದಿರಲಿ;
ಆದರೂ ನನ್ನ ಪ್ರಾರ್ಥನೆ ಯಾವಾಗಲೂ ದುಷ್ಟರ ಕಾರ್ಯಗಳಿಗೆ ವಿರೋಧವಾಗಿಯೇ ಇರುವುದು.
ಅವರ ನ್ಯಾಯಾಧಿಪತಿಗಳು ಉನ್ನತ ಸ್ಥಳದಿಂದ ಕೆಳಬಿದ್ದಾಗ
ಅವರು ನನ್ನ ಮಾತು ಕೇಳುವರು.
ಅವರು ಹೀಗೆ ಹೇಳುವರು, “ಒಬ್ಬನು ಹೊಲವನ್ನು ಉತ್ತು, ಹೆಂಟೆಗಳನ್ನು ಒಡೆದು
ಚದರಿಸುವ ಪ್ರಕಾರವೇ ನಮ್ಮ ಎಲುಬುಗಳು ಪಾತಾಳ ದ್ವಾರದಲ್ಲಿ ಎರಚಲಾಗುವುದು.”
ಆದರೆ ಸಾರ್ವಭೌಮ ಯೆಹೋವ ದೇವರೇ, ನನ್ನ ಕಣ್ಣುಗಳು ನಿಮ್ಮ ಕಡೆ ಇವೆ;
ನಿಮ್ಮನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡಿರಿ.
ಅವರು ನನಗೆ ಒಡ್ಡಿದ ಉರುಲಿನಿಂದಲೂ,
ಅಪರಾಧಗಳ ನೇಣುಗಳಿಂದಲೂ ನನ್ನನ್ನು ಕಾಪಾಡಿರಿ.
ನಾನು ತಪ್ಪಿಸಿಕೊಂಡು ಸುರಕ್ಷಿತವಾಗಿ ಹೋಗುವಷ್ಟರಲ್ಲಿ
ದುಷ್ಟರು ತಮ್ಮ ಬಲೆಗಳಲ್ಲಿಯೇ ಬೀಳಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.