Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 140
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
ಯೆಹೋವ ದೇವರೇ, ಕೆಡುಕರಿಂದ ನನ್ನನ್ನು ತಪ್ಪಿಸಿರಿ,
ಬಲಾತ್ಕಾರಿಗಳಿಂದ ನನ್ನನ್ನು ತಪ್ಪಿಸಿ ಕಾಪಾಡಿರಿ.
ಅವರು ಹೃದಯದಲ್ಲಿ ಕೇಡನ್ನು ಕಲ್ಪಿಸುತ್ತಾರೆ;
ಅವರು ಪ್ರತಿದಿನ ಕಲಹವೆಬ್ಬಿಸುತ್ತಾರೆ.
ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಹದಮಾಡುತ್ತಾರೆ;
ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ.
ಯೆಹೋವ ದೇವರೇ, ದುಷ್ಟರ ಕೈಗಳಿಂದ ನನ್ನನ್ನು ತಪ್ಪಿಸಿ ಕಾಯಿರಿ.
ಹಿಂಸಕರಿಂದ ನನ್ನನ್ನು ರಕ್ಷಿಸು,
ಅವರು ನನ್ನ ಮಾರ್ಗಗಳನ್ನು ಕೆಡಿಸುವುದಕ್ಕೆ ಉದ್ದೇಶಿಸುತ್ತಾರೆ.
ಗರ್ವಿಷ್ಠರು ನನಗೆ ಉರುಲನ್ನೂ, ಪಾಶಗಳನ್ನೂ ರಹಸ್ಯವಾಗಿ ಇಟ್ಟಿದ್ದಾರೆ;
ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ;
ನನಗೆ ಬೋನಿಟ್ಟಿದ್ದಾರೆ.
ನಾನು ಯೆಹೋವ ದೇವರಿಗೆ ಹೀಗೆ ಹೇಳಿದೆನು,
“ನೀವು ನನ್ನ ದೇವರಾಗಿದ್ದೀರಿ;
ಯೆಹೋವ ದೇವರೇ, ಕರುಣೆಗಾಗಿ ಬೇಡುವ ನನ್ನ ಮೊರೆಗೆ ಕಿವಿಗೊಡಿರಿ.
ನನ್ನ ರಕ್ಷಣೆಯ ಬಲವಾಗಿರುವ ಸಾರ್ವಭೌಮ ಯೆಹೋವ ದೇವರೇ,
ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಕಾಪಾಡುತ್ತೀರಿ.
ಯೆಹೋವ ದೇವರೇ, ದುಷ್ಟರಿಗೆ ಅವರ ಇಷ್ಟಾರ್ಥವನ್ನು ಕೊಡಬೇಡಿರಿ;
ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡಿರಿ.”
ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು,
ಅವರ ತಲೆಯ ಮೇಲೇ ಬರಲಿ.
ಉರಿ ಕೆಂಡಗಳು ಅವರ ಮೇಲೆ ಬೀಳಲಿ;
ಬೆಂಕಿಯಲ್ಲಿಯೂ ಅವರು ಏಳಲಾರದ ಹಾಗೆ,
ಇತರರು ಅವರನ್ನು ಕುಣಿಯಲ್ಲಿ ಕೆಡವಲಿ.
ಚಾಡಿಕೋರರು ದೇಶದಲ್ಲಿ ಉಳಿಯದಿರಲಿ;
ಬಲಾತ್ಕಾರಿಯನ್ನು ಕೇಡು ಬೇಟೆಯಾಡಿ ಕೆಡವಲಿ.
ಯೆಹೋವ ದೇವರು ಬಡವನಿಗೆ ವ್ಯಾಜ್ಯವನ್ನು,
ಬಲಹೀನರಿಗೆ ನ್ಯಾಯವನ್ನೂ ತೀರಿಸುವರೆಂದೂ ನಾನು ಬಲ್ಲೆನು.
ನಿಶ್ಚಯವಾಗಿ ನೀತಿವಂತರು ನಿಮ್ಮ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು;
ಯಥಾರ್ಥರು ನಿಮ್ಮ ಸನ್ನಿಧಿಯಲ್ಲಿ ಬಾಳುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.