Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 106
ಯೆಹೋವ ದೇವರನ್ನು ಸ್ತುತಿಸಿರಿ.
ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು.
ಅವರ ಪ್ರೀತಿ ಶಾಶ್ವತವಾಗಿರುವುದು.
ಯೆಹೋವ ದೇವರ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸಿರಿ,
ದೇವರನ್ನು ತಕ್ಕಂತೆ ಸ್ತುತಿಸುವವರು ಯಾರಿಗೆ ಸಾಧ್ಯ?
ನ್ಯಾಯವನ್ನು ಕಾಪಾಡಿಕೊಂಡು ಯಾವಾಗಲೂ
ಸರಿಯಾದವುಗಳನ್ನು ಪಾಲಿಸುವವರು ಧನ್ಯರು.
ದೇವರೇ, ನಿಮ್ಮ ಜನರ ಮೇಲಿರುವ ಮೆಚ್ಚುಗೆಯಿಂದ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ,
ನಿಮ್ಮ ರಕ್ಷಣೆಯಿಂದ ನನ್ನನ್ನು ದರ್ಶಿಸಿರಿ.
ಯೆಹೋವ ದೇವರೇ, ನಾನು ನೀವು ಆಯ್ದುಕೊಂಡವರ ಸುಖವನ್ನು ಕಂಡು,
ನಿಮ್ಮ ಜನರ ಸಂತೋಷದೊಂದಿಗೆ ಸಂತೋಷಿಸಿ,
ನಿಮ್ಮ ಸ್ವಕೀಯರ ಸಂಗಡ ಹೊಗಳಿಕೊಳ್ಳುವೆನು.
ನಮ್ಮ ಪಿತೃಗಳಂತೆ ನಾವು ಕೂಡಾ ಪಾಪಮಾಡಿದ್ದೇವೆ;
ಅಕ್ರಮ ಮಾಡಿದ್ದೇವೆ; ದುಷ್ಟಕೃತ್ಯಗಳನ್ನು ನಡೆಸಿದ್ದೇವೆ.
ನಮ್ಮ ಪಿತೃಗಳು ಈಜಿಪ್ಟಿನಲ್ಲಿ
ನಿಮ್ಮ ಅದ್ಭುತಗಳಿಗೆ ಲಕ್ಷಕೊಡದೆ,
ನಿಮ್ಮ ಕರುಣಾತಿಶಯವನ್ನು ನೆನಸದೆ,
ಸಮುದ್ರದ ಬಳಿಯಲ್ಲಿ ಅಂದರೆ ಕೆಂಪುಸಮುದ್ರದ ಹತ್ತಿರ ತಿರುಗಿಬಿದ್ದರು.
ಆದರೂ ದೇವರು ತಮ್ಮ ಮಹಾಶಕ್ತಿಯನ್ನು ಅವರಿಗೆ ತಿಳಿಯಮಾಡುವ ಹಾಗೆ,
ತಮ್ಮ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದರು.
ದೇವರು ಕೆಂಪು ಸಮುದ್ರವನ್ನು ಗದರಿಸಲು, ಅದು ಒಣಗಿ ಹೋಯಿತು;
ಹೀಗೆ ಮರುಭೂಮಿಯಲ್ಲಿ ನಡೆದು ಹೋದಂತೆ ಜಲಾಗಾಧದಲ್ಲಿ ಇಸ್ರಾಯೇಲರನ್ನು ನಡೆಸಿದರು.
ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿದರು,
ಶತ್ರುವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದರು.
ಪ್ರವಾಹಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು,
ವೈರಿಗಳಲ್ಲಿ ಒಬ್ಬನೂ ಉಳಿಯಲಿಲ್ಲ.
ಆಗ ಅವರು ದೇವರ ಮಾತುಗಳನ್ನು ನಂಬಿ,
ದೇವರಿಗೆ ಸ್ತೋತ್ರವನ್ನು ಹಾಡಿದರು.
ಆದರೆ ಬೇಗನೇ ದೇವರು ಮಾಡಿದ ಕೆಲಸಗಳನ್ನು ಮರೆತುಬಿಟ್ಟು,
ದೇವರ ಸಂಕಲ್ಪಕ್ಕೆ ಅವರು ಕಾದುಕೊಳ್ಳದೆ ಹೋದರು.
ಮರುಭೂಮಿಯಲ್ಲಿ ದುರಾಶೆಯಿಂದ ಆಶಿಸಿ,
ಹಾಳು ಪ್ರದೇಶದಲ್ಲಿ ದೇವರನ್ನು ಪರೀಕ್ಷಿಸಿದರು.
ಆಗ ದೇವರು ಅವರ ಬೇಡಿಕೆಯಂತೆಯೇ ಅವರಿಗೆ ಕೊಟ್ಟುಬಿಟ್ಟರು;
ಆದರೆ ಅವರ ದೇಹಕ್ಕೆ ಭೀಕರ ರೋಗವನ್ನು ಸಹ ಅನುಮತಿಸಿದರು.
ಇಸ್ರಾಯೇಲರು ಪಾಳೆಯದಲ್ಲಿ ಮೋಶೆಯ ಮೇಲೆಯೂ,
ಯೆಹೋವ ದೇವರಿಗೆ ಪ್ರತಿಷ್ಠಿತನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
ಆಗ ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ,
ಅಬೀರಾಮನ ಗುಂಪನ್ನು ಮುಚ್ಚಿಬಿಟ್ಟಿತು.
ಬೆಂಕಿಯು ಅವರ ಗುಂಪಿನಲ್ಲಿ ಉರಿದು,
ಜ್ವಾಲೆಯು ದುಷ್ಟರನ್ನು ಸುಟ್ಟಿತು.
ಅವರು ಹೋರೇಬಿನಲ್ಲಿ ಎರಕದ ಕರುವನ್ನು ಮಾಡಿ,
ಆ ವಿಗ್ರಹಕ್ಕೆ ಅಡ್ಡಬಿದ್ದರು.
ಹೀಗೆ ಅವರು ತಮ್ಮ ಮಹಿಮೆಯುಳ್ಳ ದೇವರನ್ನು
ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
ಅವರು ತಮ್ಮನ್ನು ರಕ್ಷಿಸಿದ ದೇವರನ್ನು ಬೇಗ ಮರೆತುಬಿಟ್ಟರು.
ಹೌದು, ಈಜಿಪ್ಟ್ ದೇಶದಲ್ಲಿ ಮಹತ್ಕಾರ್ಯಗಳನ್ನೂ,
ಹಾಮ ದೇಶದಲ್ಲಿ ಅದ್ಭುತಗಳನ್ನೂ,
ಕೆಂಪುಸಮುದ್ರದ ಬಳಿಯಲ್ಲಿ ಅತಿಶಯವಾದವುಗಳನ್ನೂ ಮಾಡಿದ ದೇವರನ್ನು ಮರೆತುಬಿಟ್ಟರು.
ಆದ್ದರಿಂದ ದೇವರು ಅವರಿಗೆ ಪೂರ್ಣದಂಡನೆ ಕೊಡುವುದಾಗಿ ಹೇಳಿದರು.
ಆದರೆ ಅವರು ಆಯ್ದುಕೊಂಡ ಮೋಶೆಯು,
ದೇವರ ಕಠಿಣ ತೀರ್ಮಾನವನ್ನು ಶಾಂತಪಡಿಸಲು ಆಪತ್ತಿನಲ್ಲಿ
ದೇವರ ಮುಂದೆ ಮಧ್ಯಸ್ಥನಾಗಿ ನಿಂತುಕೊಂಡನು.
ಹೌದು, ಇಸ್ರಾಯೇಲರು ಮನೋಹರವಾದ ದೇಶವನ್ನು ಹೀನೈಸಿ,
ದೇವರ ಮಾತನ್ನು ನಂಬದೆ ಹೋದರು.
ತಮ್ಮ ಗುಡಾರಗಳಲ್ಲಿ ಗೊಣಗುಟ್ಟಿ
ಯೆಹೋವ ದೇವರ ಮಾತನ್ನು ಹೇಳದೆ ಹೋದರು.
ಆದ್ದರಿಂದ ದೇವರು ಅವರನ್ನು ಮರುಭೂಮಿಯಲ್ಲಿ ಬೀಳುವಂತೆಯೂ,
ಅವರ ಸಂತತಿಯರು ದೇಶಗಳಲ್ಲಿ ಚದರಿಸುವಂತೆಯೂ
ತಮ್ಮ ಕೈಯನ್ನು ಎತ್ತಿ ಅವರಿಗೆ ಪ್ರಮಾಣ ಮಾಡಬೇಕಾಯಿತು.
ಇಸ್ರಾಯೇಲರು ಬಾಳ್ ಪೆಯೋರನ ದೇವತೆಗೆ ತಮ್ಮನ್ನು ಒಪ್ಪಿಸಿಕೊಟ್ಟರು;
ಜೀವವಿಲ್ಲದ ದೇವರುಗಳಿಗೆ ಅರ್ಪಿಸಿದ ಯಜ್ಞಗಳನ್ನು ತಿಂದರು.
ತಮ್ಮ ಕ್ರಿಯೆಗಳಿಂದ ದೇವರನ್ನು ಅಸಂತೋಷಪಡಿಸಿದರು.
ಆದ್ದರಿಂದ ವ್ಯಾಧಿಯು ಅವರಲ್ಲಿ ಹಬ್ಬಿತು.
ಆಗ ಫೀನೆಹಾಸನು ಎದ್ದು ಬಂದು ದಂಡಿಸಿದ್ದರಿಂದ
ವ್ಯಾಧಿ ನಿಂತುಹೋಯಿತು.
ಇದು ತಲತಲಾಂತರಕ್ಕೂ, ಯುಗಯುಗಕ್ಕೂ
ಫೀನೆಹಾಸನಿಗೆ ನೀತಿ ಎಂದು ಎಣಿಸಲಾಯಿತು.
ಮೆರೀಬಾದ1 ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು.
ಅಲ್ಲಿ ಅವರ ನಿಮಿತ್ತ ಮೋಶೆಗೆ ಕೇಡು ಬಂತು.
ಏಕೆಂದರೆ ಇಸ್ರಾಯೇಲರು ದೇವರ ಆತ್ಮನಿಗೆ ತಿರುಗಿ ಬಿದ್ದದ್ದರಿಂದ,
ಮೋಶೆ ದುಡುಕಿ ಮಾತನಾಡಿದನು.
ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ ಜನಗಳನ್ನು
ಅವರು ದಂಡಿಸದೆ ಹೋದರು.
ಆದರೆ ಇತರ ಜನಾಂಗಗಳ ಸಂಗಡ ಕೂಡಿಕೊಂಡು,
ಅವರ ಪದ್ಧತಿಗಳನ್ನು ಕಲಿತುಕೊಂಡರು.
ಅವರ ವಿಗ್ರಹಗಳಿಗೆ ಆರಾಧನೆ ಮಾಡಿದರು;
ಅವು ಅವರಿಗೆ ಉರುಲಿನಂತಾದವು.
ತಮ್ಮ ಗಂಡು ಮಕ್ಕಳನ್ನೂ,
ಹೆಣ್ಣು ಮಕ್ಕಳನ್ನೂ ಸುಳ್ಳು ದೇವರುಗಳಿಗೆ ಬಲಿಕೊಟ್ಟರು.
ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ
ನಿರಪರಾಧದ ರಕ್ತವನ್ನು ಚೆಲ್ಲಿ,
ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ,
ದೇಶವನ್ನು ರಕ್ತದಿಂದ ಅಶುದ್ಧ ಮಾಡಿದರು.
ಹೀಗೆ ತಮ್ಮ ದುಷ್ಕೃತ್ಯಗಳಿಂದ ತಮ್ಮನ್ನು ಅಪವಿತ್ರ ಮಾಡಿಕೊಂಡು,
ತಮ್ಮ ಕ್ರಿಯೆಗಳಿಂದ ದುರಾಚಾರಿಗಳಾದರು.
ಆಗ ಯೆಹೋವ ದೇವರು ತಮ್ಮ ಜನರ ಮೇಲೆ ಬಹು ಬೇಸರಗೊಂಡರು.
ದೇವರು ತಮ್ಮ ವಾರಸುದಾರರಾದ ಇಸ್ರಾಯೇಲರ ಮೇಲೆ ಅಸಂತೋಷಗೊಂಡು,
ಅವರನ್ನು ಇತರ ಜನಾಂಗಗಳ ಕೈಗೆ ಒಪ್ಪಿಸಿಕೊಟ್ಟರು.
ಹೀಗೆ ಅವರ ವೈರಿಗಳು ಅವರನ್ನು ಆಳಿದರು.
ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು;
ಅವರ ಕೈಕೆಳಗೆ ಅವರು ಅಧೀನರಾದರು.
ಅನೇಕ ಸಾರಿ ದೇವರು ಇಸ್ರಾಯೇಲರನ್ನು ಬಿಡಿಸಿದರು,
ಆದರೆ ಅವರು ತಿರುಗಿಬೀಳುತ್ತಲೇ ಇದ್ದರು;
ತಮ್ಮ ಅಕ್ರಮದಿಂದಲೇ ಅವರು ಕುಗ್ಗಿಹೋದರು;
ಆದರೂ ಅವರ ಕೂಗನ್ನು ದೇವರು ಕೇಳಿದಾಗ ಇಕ್ಕಟ್ಟಿನಲ್ಲಿದ್ದ
ಅವರ ಮೇಲೆ ಲಕ್ಷ್ಯವಿಟ್ಟು,
ಅವರಿಗಾಗಿ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು,
ತಮ್ಮ ಅತಿಶಯವಾದ ಪ್ರೀತಿಯ ಪ್ರಕಾರ,
ಅವರನ್ನು ಸೆರೆಹಿಡಿದವರ
ಕರುಣೆ ತೋರುವಂತೆ ಮಾಡಿದರು.
ನಮ್ಮ ದೇವರಾದ ಯೆಹೋವ ದೇವರೇ,
ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ,
ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ,
ನಮ್ಮನ್ನು ರಕ್ಷಿಸಿರಿ.
ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ
ಯುಗಯುಗಕ್ಕೂ ಸ್ತುತಿಯುಂಟಾಗಲಿ.
ಜನರೆಲ್ಲರೂ, “ಆಮೆನ್!” ಎಂದು ಹೇಳಲಿ.
ನೀವು ಯೆಹೋವ ದೇವರನ್ನು ಸ್ತುತಿಸಿರಿ.
Source notes (1)
- Footnote ಮೆರೀಬಾದ ಅಂದರೆ ಜಗಳ ಎಂದು ಅರ್ಥ. ನೋಡಿರಿ ವಿಮೋ 17:7
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.