Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯಾಜಕಕಾಂಡ 1

ದಹನಬಲಿ

ಯೆಹೋವ ದೇವರು ಮೋಶೆಯನ್ನು ಕರೆದು, ದೇವದರ್ಶನದ ಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ, ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನಂದರೆ: “ ‘ನಿಮ್ಮಲ್ಲಿ ಯಾರಾದರೂ ಯೆಹೋವ ದೇವರಿಗೆ ಒಂದು ಪ್ರಾಣಿಯನ್ನು ಕಾಣಿಕೆಯಾಗಿ ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ, ಆಡು ಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ.

“ ‘ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ, ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಯೆಹೋವ ದೇವರಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು. ದಹನಬಲಿ ಅರ್ಪಿಸುವವನು ತನ್ನ ಕೈಯನ್ನು ಆ ಪ್ರಾಣಿಯ ತಲೆಯ ಮೇಲೆ ಇಡಬೇಕು. ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವುದು. ಅವನು ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು. ಆಗ ಯಾಜಕರಾದ ಆರೋನನ ಪುತ್ರರು ರಕ್ತವನ್ನು ತಂದು, ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು. ಅವನು ಆ ದಹನಬಲಿಯ ಚರ್ಮವನ್ನು ಸುಲಿದು, ಅದರ ದೇಹವನ್ನು ಕಡಿದು, ತುಂಡುತುಂಡಾಗಿ ಮಾಡಬೇಕು. ಯಾಜಕನಾದ ಆರೋನನ ಪುತ್ರರು ಬಲಿಪೀಠದ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು. ಆಗ ಯಾಜಕರಾದ ಆರೋನನ ಪುತ್ರರು ಅದರ ಭಾಗಗಳನ್ನು ಅಂದರೆ, ತಲೆಯನ್ನೂ ಮತ್ತು ಕೊಬ್ಬನ್ನೂ ಬಲಿಪೀಠದ ಮೇಲೆ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು. ಅದರ ಕರುಳುಗಳನ್ನೂ, ಕಾಲುಗಳನ್ನೂ ಅವರು ನೀರಿನಲ್ಲಿ ತೊಳೆಯಬೇಕು. ಯಾಜಕನು ಎಲ್ಲವನ್ನೂ ಬಲಿಪೀಠದ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ, ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.

“ ‘ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆಯಿಂದ ತರುವುದಾದರೆ ಅವನು ಕುರಿಗಳಲ್ಲಾಗಲಿ, ಮೇಕೆಗಳಲ್ಲಾಗಲಿ, ಕಳಂಕರಹಿತ ಒಂದು ಗಂಡನ್ನು ತರಬೇಕು. ಅವನು ಅದನ್ನು ಬಲಿಪೀಠದ ಉತ್ತರದ ಕಡೆಯಲ್ಲಿ ಯೆಹೋವ ದೇವರ ಮುಂದೆ ವಧಿಸಬೇಕು. ಇದಲ್ಲದೆ ಯಾಜಕರಾದ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು. ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ, ಯಾಜಕನು ಆ ತುಂಡುಗಳನ್ನೂ, ತಲೆಯನ್ನೂ, ಕೊಬ್ಬನ್ನೂ ಬಲಿಪೀಠದ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು. ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು. ಆಗ ಯಾಜಕನು ಅವೆಲ್ಲವುಗಳನ್ನೂ ತಂದು ಬಲಿಪೀಠದ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.

“ ‘ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿಗಳಾಗಿದ್ದರೆ, ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯನ್ನಾಗಲಿ ಇಲ್ಲವೆ ಪಾರಿವಾಳದ ಮರಿಯನ್ನಾಗಲಿ ತರಬೇಕು. ಆಗ ಯಾಜಕನು ಅದನ್ನೂ ಬಲಿಪೀಠದ ಬಳಿಗೆ ತಂದು ಅದರ ತಲೆಯನ್ನು ಮುರಿದು, ಬಲಿಪೀಠದ ಮೇಲೆ ಸುಡಬೇಕು. ಅದರ ರಕ್ತವನ್ನು ಬಲಿಪೀಠದ ಹೊರಬದಿಯಲ್ಲಿ ಹಿಂಡಬೇಕು. ಇದಲ್ಲದೆ ಅವನು ಅದರ ರೆಕ್ಕೆ ಪುಕ್ಕಗಳೊಂದಿಗೆ ಕರುಳುಗಳನ್ನೂ ಕಿತ್ತು, ಬಲಿಪೀಠದ ಬಳಿ ಪೂರ್ವ ಭಾಗದಲ್ಲಿ ಬೂದಿಯಿರುವ ಸ್ಥಳದಲ್ಲಿ ಬಿಸಾಡಬೇಕು. ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು. ಆದರೆ ಬೇರೆಬೇರೆಯಾಗಿ ವಿಭಾಗಿಸಬಾರದು. ಆಗ ಯಾಜಕನು ಅದನ್ನು ಬಲಿಪೀಠದ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆ ಸುಡಬೇಕು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.