Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ವಿಮೋಚನಕಾಂಡ 40

ಗುಡಾರದ ಪ್ರತಿಷ್ಠಾಪನೆ

ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು. ಒಡಂಬಡಿಕೆಯ ಮಂಜೂಷವನ್ನು ಅದರಲ್ಲಿ ಇಟ್ಟು, ಅದನ್ನು ನೀನು ಪರದೆಯಿಂದ ಮುಚ್ಚಬೇಕು. ಮೇಜನ್ನು ಒಳಗೆ ತಂದು, ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪಸ್ತಂಭವನ್ನು ಒಳಗೆ ತಂದು, ನೀನು ಅದರ ದೀಪಗಳನ್ನು ಅಂಟಿಸಬೇಕು. ನೀನು ಮಾಡಿದ ಚಿನ್ನದ ಧೂಪಪೀಠವನ್ನು ಒಡಂಬಡಿಕೆಯ ಮಂಜೂಷದ ಎದುರಾಗಿ ಇಟ್ಟು, ದೇವದರ್ಶನದ ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಬೇಕು.

“ನೀನು ದಹನಬಲಿಯ ಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡಬೇಕು. ನೀನು ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಗಂಗಾಳವನ್ನಿಟ್ಟು, ಅದರಲ್ಲಿ ನೀರನ್ನು ತುಂಬಿಸಬೇಕು. ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ಪರದೆಯನ್ನು ತೂಗು ಹಾಕಬೇಕು.

“ನೀನು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ, ಅದರಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಪರಿಶುದ್ಧ ಮಾಡು. ಆಗ ಅದು ಪರಿಶುದ್ಧವಾಗುವುದು. ದಹನಬಲಿಯ ಪೀಠವನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ನೀನು ಅಭಿಷೇಕಿಸಿ, ಬಲಿಪೀಠವನ್ನು ಪವಿತ್ರಮಾಡು. ಆಗ ಅದು ಅತಿಪರಿಶುದ್ಧವಾದ ಬಲಿಪೀಠವಾಗುವುದು. ಗಂಗಾಳವನ್ನೂ, ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ, ಅದನ್ನು ಪ್ರತಿಷ್ಠಾಪನೆ ಮಾಡಬೇಕು.

“ಆರೋನನನ್ನೂ, ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ, ಅವರನ್ನು ನೀರಿನಿಂದ ಸ್ನಾನ ಮಾಡಿಸಬೇಕು. ಆರೋನನು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ, ಅವನನ್ನು ಶುದ್ಧಮಾಡಬೇಕು. ಅವನ ಪುತ್ರರನ್ನು ನೀನು ಬರಮಾಡಿಕೊಂಡು, ಅವರಿಗೆ ಅಂಗಿಗಳನ್ನು ತೊಡಿಸಿ, ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ, ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವರನ್ನೂ ನೀನು ಅಭಿಷೇಕಿಸು. ಅವರ ಈ ಅಭಿಷೇಕದಿಂದ ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವುದು,” ಎಂದು ಹೇಳಿದರು. ಮೋಶೆಯು ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.

ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಗುಡಾರವು ಎದ್ದುನಿಂತಿತು. ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ, ಅದರ ಕಾಲುಗಳನ್ನು ಬಿಗಿದು, ಅದರ ಚೌಕಟ್ಟುಗಳನ್ನು ಇರಿಸಿ, ಅಗುಳಿಗಳನ್ನು ಹಾಕಿ, ಅದರ ಸ್ತಂಭಗಳನ್ನು ನಿಲ್ಲಿಸಿದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ, ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.

ಅವನು ಆಜ್ಞಾಶಾಸನಗಳನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿಟ್ಟು, ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ, ಮಂಜೂಷದ ಮೇಲೆ ಕರುಣಾಸನವನ್ನು ಇಟ್ಟನು. ಅವನು ಮಂಜೂಷವನ್ನು ಗುಡಾರಕ್ಕೆ ತಂದು, ಮರೆಮಾಡುವ ಪರದೆಯನ್ನಿರಿಸಿ, ಒಡಂಬಡಿಕೆಯ ಮಂಜೂಷವನ್ನು ಮರೆಮಾಡಿದನು. ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಮೋಶೆಯು ಮಾಡಿದನು.

ಅನಂತರ ಮೋಶೆ ದೇವದರ್ಶನದ ಗುಡಾರದ ಉತ್ತರ ಭಾಗದಲ್ಲಿ, ಪರದೆಯ ಹೊರಗೆ ಮೇಜನ್ನು ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು.

ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಯೆಹೋವ ದೇವರ ಸನ್ನಿಧಿಯಲ್ಲಿ ದೀಪಗಳನ್ನು ಇರಿಸಿದನು.

ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ಪರದೆಯ ಮುಂದೆ ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.

ಗುಡಾರದ ಬಾಗಿಲಿನ ಪರದೆಯನ್ನು ತೂಗುಹಾಕಿದನು. ದೇವದರ್ಶನದ ಗುಡಾರದ ಬಳಿಯಲ್ಲಿ ದಹನಬಲಿಯ ಪೀಠವನ್ನು ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠ ಇಟ್ಟು ಅದರ ಮೇಲೆ ದಹನಬಲಿ ಮತ್ತು ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು.

ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯ ಗಂಗಾಳವನ್ನು ಇಟ್ಟು, ಅದರಲ್ಲಿ ತೊಳೆಯುವುದಕ್ಕೆ ನೀರನ್ನು ತುಂಬಿಸಿದನು. ಮೋಶೆಯೂ, ಆರೋನನೂ, ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆದುಕೊಂಡರು. ಅವರು ದೇವದರ್ಶನದ ಗುಡಾರದ ಒಳಗೆ ಸೇರುವ ಸಮಯದಲ್ಲಿಯೂ, ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ಸ್ನಾನ ಮಾಡಿದರು.

ಮೋಶೆಯು ಗುಡಾರಕ್ಕೂ, ಬಲಿಪೀಠಕ್ಕೂ ಸುತ್ತಲೂ ಅಂಗಳವನ್ನು ನಿಲ್ಲಿಸಿ, ಅಂಗಳದ ಬಾಗಿಲಿನ ಪರದೆಯನ್ನು ತೂಗುಹಾಕಿದನು. ಈ ಪ್ರಕಾರ ಮೋಶೆಯು ಆ ಕೆಲಸವನ್ನು ತೀರಿಸಿದನು.

ಯೆಹೋವ ದೇವರ ಮಹಿಮೆ

ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿಕೊಂಡಿತು. ದೇವದರ್ಶನದ ಗುಡಾರದ ಮೇಲೆ ಮೇಘವು ನೆಲೆಯಾಗಿದ್ದದರಿಂದಲೂ, ಯೆಹೋವ ದೇವರು ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿದ್ದರಿಂದಲೂ, ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.

ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ, ಇಸ್ರಾಯೇಲರು ತಮ್ಮ ಪ್ರಯಾಣಕ್ಕಾಗಿ ಮುಂದೆ ಹೊರಡುತ್ತಿದ್ದರು. ಆದರೆ ಮೇಘವು ಮೇಲಕ್ಕೆ ಎತ್ತದೇ ಇರುವಾಗ ಅದು ಎತ್ತುವ ದಿವಸದವರೆಗೆ ಅವರು ಪ್ರಯಾಣ ಮಾಡಲಿಲ್ಲ. ಏಕೆಂದರೆ ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿ ಅವರ ಕಣ್ಣುಗಳ ಮುಂದೆ ಹಗಲಿನಲ್ಲಿ ಯೆಹೋವ ದೇವರ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.