Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೋಬ 26

ಯೋಬನ ಉತ್ತರ

ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:

“ಶಕ್ತಿ ಇಲ್ಲದವನಿಗೆ ನೀನು ಹೇಗೆ ಸಹಾಯ ಮಾಡಿದೆ?

ತ್ರಾಣವಿಲ್ಲದ ಕೈಯನ್ನು ಹೇಗೆ ರಕ್ಷಿಸಿದೆ?

ಜ್ಞಾನವಿಲ್ಲದವನಿಗೆ ಏನು ಬುದ್ಧಿವಾದ ಹೇಳಿರುವೆ?

ನೀನು ಯಾವ ವಿವೇಕದ ಮಾತುಗಳನ್ನು ಬಹಳವಾಗಿ ಪ್ರದರ್ಶಿಸಿದೆ.

ಈ ಮಾತುಗಳನ್ನು ಹೇಳಲು ನಿನಗೆ ಯಾರು ಸಹಾಯ ಮಾಡಿದರು?

ಯಾರ ಆತ್ಮವು ನಿನ್ನ ಬಾಯಿಂದ ಮಾತಾಡಿದ್ದು?

“ಸಾಗರದ ಕೆಳಗಿನ ಲೋಕದಲ್ಲಿ ವಾಸಿಸುವ

ಸತ್ತವರ ಆತ್ಮಗಳು ಆಳವಾದ ಯಾತನೆಯಲ್ಲಿವೆ.

ಪಾತಾಳವು ದೇವರ ದೃಷ್ಟಿಗೆ ತೆರೆದಿದೆ;

ನಾಶಲೋಕವು ದೇವರಿಗೆ ಮರೆಯಾಗಿಲ್ಲ.

ದೇವರು ಉತ್ತರ ದಿಕ್ಕಿನ ಆಕಾಶವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾರೆ;

ದೇವರು ಭೂಮಿಯನ್ನು ಏನೂ ಇಲ್ಲದರ ಮೇಲೆ ತೂಗು ಹಾಕಿದ್ದಾರೆ.

ತಮ್ಮ ಮೇಘಗಳಲ್ಲಿ ನೀರನ್ನು ತುಂಬಿ ಕಟ್ಟುತ್ತಾರೆ;

ಆದರೂ ಮೋಡವು ಅದರ ಭಾರದಿಂದ ಒಡೆದುಹೋಗುವುದಿಲ್ಲ.

ದೇವರು ತಮ್ಮ ಪೂರ್ಣಚಂದ್ರ ಸಿಂಹಾಸನವನ್ನು ಮರೆಮಾಡುತ್ತಾರೆ.

ಅದರ ಮುಂದೆ ಮೋಡವನ್ನು ಕವಿಸುತ್ತಾರೆ.

ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ,

ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ.

ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ;

ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ.

ದೇವರು ತಮ್ಮ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾರೆ;

ದೇವರು ತಮ್ಮ ಜ್ಞಾನದಿಂದ ಘಟಸರ್ಪನಾದ ರಹಾಬನನ್ನು ಹೊಡೆದುಹಾಕುತ್ತಾರೆ.

ದೇವರ ಶ್ವಾಸದಿಂದ ಆಕಾಶಮಂಡಲವು ಶುಭ್ರವಾಗಿದೆ;

ದೇವರು ಹಸ್ತವು ಹರಿದೋಡುವ ಸರ್ಪವನ್ನು ಇರಿಯುತ್ತದೆ.

ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ;

ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ;

ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.