Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 57

ಶತ್ರುಬಾಧಿತನಾದ ಸದ್ಭಕ್ತನ ವಿಜ್ಞಾಪನೆಯೂ ಸ್ತೋತ್ರವೂ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಅಲ್ತಷ್ಖೇತೆಂಬ ರಾಗ; ದಾವೀದನು ಸೌಲನ ಭೀತಿಯಿಂದ ಓಡಿಹೋಗಿ ಗುಹೆಯಲ್ಲಿ ಅಡಗಿಕೊಂಡಿದ್ದಾಗ ರಚಿಸಿದ ಕಾವ್ಯ.

ದೇವರೇ, ಕರುಣಿಸು, ನನ್ನನ್ನು ಕರುಣಿಸು.

ನೀನೇ ನನ್ನ ಆಶ್ರಯಸ್ಥಾನವಲ್ಲವೇ!

ಆಪತ್ತುಗಳು ಕಳೆದುಹೋಗುವ ತನಕ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.

ಪರಾತ್ಪರನಾದ ದೇವರಿಗೆ ಮೊರೆಯಿಡುವೆನು,

ನನ್ನ ಕಾರ್ಯವನ್ನು ಸಫಲಮಾಡುವ ದೇವರನ್ನು ಕೂಗಿ ಕರೆಯುವೆನು.

ಆತನು ಪರಲೋಕದಿಂದ ಆಲಿಸಿ,

ನಿಂದಕರ ಮಾತಿನಿಂದ ನನ್ನನ್ನು ತಪ್ಪಿಸುವನು; ಸೆಲಾ

ತನ್ನ ಪ್ರೀತಿಯನ್ನು ಮತ್ತು ಸತ್ಯತೆಯನ್ನೂ ತೋರ್ಪಡಿಸುವನು.

ನಾನು ಸಿಂಹಗಳಂತಿರುವ ಶತ್ರುಗಳ ಮಧ್ಯದಲ್ಲಿ ಸಿಕ್ಕಿದ್ದೇನೆ;

ದುರಾಶೆಯಿಂದ ಕಬಳಿಸುವಂತಹ1 ಮನುಷ್ಯರ ನಡುವೆ ಬಿದ್ದಿದ್ದೇನೆ.

ಅವರ ಹಲ್ಲುಗಳು ಈಟಿ ಮತ್ತು ಬಾಣಗಳಂತಿವೆ,

ನಾಲಿಗೆಗಳು ಹದವಾದ ಕತ್ತಿಗಳೇ.

ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ;

ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

ನನ್ನ ಕಾಲಿಗೆ ಬಲೆಯನ್ನು ಹಾಸಿದ್ದಾರೆ;

ನನ್ನ ಪ್ರಾಣವು ಕುಂದಿಹೋಯಿತು.

ನನ್ನ ದಾರಿಯಲ್ಲಿ ಕುಣಿಯನ್ನು ಅಗೆದರು;

ತಾವೇ ಅದರಲ್ಲಿ ಬಿದ್ದುಹೋದರು. ಸೆಲಾ

ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ.

ನಾನು ವಾದ್ಯಗಳನ್ನು ನುಡಿಸುತ್ತಾ ಹಾಡುವೆನು.

ನನ್ನ ಮನವೇ, ಚುರುಕಾಗು; ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ.

ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.

ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು;

ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.

ಏಕೆಂದರೆ ನಿನ್ನ ಕೃಪೆಯು ಆಕಾಶವನ್ನೂ,

ನಿನ್ನ ಸತ್ಯತೆಯು ಮುಗಿಲನ್ನೂ ಮುಟ್ಟುವಷ್ಟು ದೊಡ್ಡವಾಗಿವೆ.

ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ;

ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

Source notes (1)
  1. Footnote ದುರಾಶೆಯಿಂದ ಕಬಳಿಸುವಂತಹ ಅಥವಾ ಬೆಂಕಿಕಾರುವ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.