Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 56

ಶತ್ರುಪೀಡಿತರಾದ ಭಕ್ತರ ಪ್ರಾರ್ಥನೆ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೋನತ್ ಎಲೆಮ್ ರೆಹೋಕೀಮ್ ಎಂಬ ರಾಗ; ದಾವೀದನು ಗತ್ ಎಂಬ ಊರಲ್ಲಿ ಫಿಲಿಷ್ಟಿಯರ ಕೈವಶವಾದಾಗ ರಚಿಸಿದ ಕಾವ್ಯ.

ದೇವರೇ, ಕರುಣಿಸು; ನರರು ನನ್ನನ್ನು ತುಳಿದುಬಿಡಬೇಕೆಂದು ಎದ್ದಿದ್ದಾರೆ.

ನನ್ನ ಎದುರಾಳಿಗಳು ಹಗಲೆಲ್ಲಾ ಯುದ್ಧಕ್ಕೆ ನಿಂತು ಬಾಧಿಸುತ್ತಾರೆ.

ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ;

ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಜನರು.

ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು.

ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು;

ದೇವರನ್ನು ನಂಬಿ ನಿರ್ಭಯದಿಂದಿರುವೆನು.

ನರಪ್ರಾಣಿಗಳು ನನಗೆ ಏನು ಮಾಡಾರು?

ಹಗಲೆಲ್ಲಾ ನನ್ನ ಮಾತುಗಳನ್ನು ಅಪಾರ್ಥಮಾಡುತ್ತಾರೆ;

ಅವರು ಬಗೆಯುವುದೆಲ್ಲ ನನಗೆ ಕೇಡೇ.

ಅವರು ಒಟ್ಟುಗೂಡಿ ನನ್ನ ಜೀವ ತೆಗೆಯಬೇಕೆಂದು ಹೊಂಚುಹಾಕಿ,

ನನ್ನ ಹೆಜ್ಜೆಜಾಡು ಹಿಡಿದು ಬರುತ್ತಾರೆ.

ಇಂಥ ಅನ್ಯಾಯಗಾರರು ತಪ್ಪಿಸಿಕೊಳ್ಳಬಹುದೋ?

ದೇವರೇ, ರೌದ್ರದಿಂದ ಆ ಜನಾಂಗಗಳನ್ನು ಉರುಳಿಸಿಬಿಡು.

ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ.

ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆಯಲ್ಲಾ;

ಅದರ ವಿಷಯವಾಗಿ ನಿನ್ನ ಪುಸ್ತಕದಲ್ಲಿ ಬರೆದದೆಯಲ್ಲಾ.

ನಾನು ಆತನಿಗೆ ಮೊರೆಯಿಡುವಾಗಲೇ ನನ್ನ ಶತ್ರುಗಳು ಫಕ್ಕನೆ ಹಿಂದಿರುಗಿ ಓಡುವರು; 1

ದೇವರು ನನ್ನ ಸಂಗಡ ಇರುವುದು ನಿಶ್ಚಯ.

ದೇವರ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ.

ಯೆಹೋವನ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ.

ದೇವರನ್ನು ನಂಬಿ ನಿರ್ಭಯದಿಂದಿರುವೆನು;

ನರಪ್ರಾಣಿಗಳು ನನಗೆ ಏನು ಮಾಡಾರು?

ದೇವರೇ, ನಿನಗೆ ಹೊತ್ತ ಹರಕೆಗಳನ್ನು ನಾನು ಸಲ್ಲಿಸುವೆನು;

ಕೃತಜ್ಞತಾ ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.

ಏಕೆಂದರೆ, ನಾನು ಜೀವದಿಂದ ಬೆಳಕಿನಲ್ಲಿದ್ದು ನಿನಗೆ ನಡೆದುಕೊಳ್ಳಬೇಕೆಂದು

ನೀನು ನನ್ನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ,

ನನ್ನ ಪಾದಗಳನ್ನು ಎಡವಿಬೀಳದಂತೆ ಕಾಪಾಡಿದ್ದಿ.

Source notes (1)
  1. Footnote ಅಥವಾ ನನಗೆ ಇದು ತಿಳಿದಿದೆ ಯಾಕೆಂದರೆ ದೇವರು ನನ್ನ ಕಡೆಯಲ್ಲಿದ್ದಾನೆ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.