Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 17

ಶತ್ರುಗಳಿಂದ ಕಾಪಾಡಬೇಕೆಂಬ ನಿರಪರಾಧಿಯ ಬೇಡಿಕೆ

ದಾವೀದನ ಪ್ರಾರ್ಥನೆ.

ಯೆಹೋವನೇ, ನ್ಯಾಯವಾದುದನ್ನು ಆಲೈಸು;

ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು;

ಅದು ಕಪಟವಾದ ಬಾಯಿಂದ ಬಂದದ್ದಲ್ಲ.

ನಿನ್ನಿಂದ ನನಗೆ ನ್ಯಾಯವಾದ ತೀರ್ಪು ಉಂಟಾಗಲಿ;

ನೀನು ನೀತಿಗನುಸಾರವಾಗಿ ನೋಡುವವನಲ್ಲವೇ.

ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ,

ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ,

ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ; 1

ನನ್ನ ಬಾಯಿ ಮಾತುಗಳಲ್ಲಿ ತಪ್ಪುವುದಿಲ್ಲ ಎಂದು ತೀರ್ಮಾನಿಸಿದ್ದೇನೆ.

ನಾನಂತೂ ಲೋಕವ್ಯವಹಾರಗಳಲ್ಲಿ ಬಲಾತ್ಕಾರಿಗಳಂತೆ ನಡೆಯದೆ

ನಿನ್ನ ಮಾತನ್ನೇ ಅನುಸರಿಸಿದ್ದೇನೆ.

ನಿನ್ನ ಮಾರ್ಗದಲ್ಲೇ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ;

ನನ್ನ ಕಾಲು ಜಾರಲಿಲ್ಲ.

ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ,

ಕಿವಿಗೊಟ್ಟು ಕೇಳು.

ಭುಜಬಲವನ್ನು ಪ್ರಯೋಗಿಸಿ,

ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ,

ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು.

ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ,

ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ.

ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ದುಷ್ಟರಿಂದ ಕಾಯಿ;

ಕಣ್ಣು ಗುಡ್ಡಿನಂತೆಯೇ ಕಾಪಾಡು.

ಅವರು ತಮ್ಮ ಹೃದಯವನ್ನು ಕಠಿಣಮಾಡಿದ್ದಾರೆ;

ಅಹಂಕಾರದಿಂದ ಮಾತನಾಡುತ್ತಾರೆ.

ನಾವು ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲಾ ನಮ್ಮನ್ನು ಸುತ್ತಿಕೊಳ್ಳುತ್ತಾರೆ;

ನಮ್ಮನ್ನು ನೆಲಕ್ಕೆ ಬೀಳಿಸಬೇಕೆಂದು ಸಮಯನೋಡುತ್ತಾರೆ.

ನನ್ನ ಶತ್ರುವು ಸೀಳಿಬಿಡಲಾಶಿಸುವ ಸಿಂಹದಂತೆಯೂ,

ಮರೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹದಂತೆಯೂ ಇದ್ದಾನೆ.

ಯೆಹೋವನೇ, ನೀನು ಅವನಿಗೆ ಎದುರಾಗಿ ನಿಂತು ಅವನನ್ನು ಕೆಡವಿಬಿಡು;

ನಿನ್ನ ಕತ್ತಿಯಿಂದ ನನ್ನ ಪ್ರಾಣವನ್ನು ದುಷ್ಟರಿಗೆ ತಪ್ಪಿಸಿ ಕಾಪಾಡು.

ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು

ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು;

ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ.

ಅವರು ಸಂತಾನವೃದ್ಧಿಹೊಂದಿ ಉಳಿದ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಡುತ್ತಾರೆ.

ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು.

ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

Source notes (1)
  1. Footnote ಅಥವಾ ನಾನು ಇತರರಂತೆ ಕೆಟ್ಟ ಮಾತುಗಳನ್ನು ಆಡುವುದಿಲ್ಲ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.