Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 16

ಯೆಹೋವನ ಸೇವೆಯು ಪೂರ್ಣಾನಂದಕರವಾದದ್ದು

ದಾವೀದನ ಕಾವ್ಯ.

ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು.

ನಾನು ಯೆಹೋವನನ್ನು ಕುರಿತು, “ನೀನೇ ನನ್ನ ಒಡೆಯನು;

ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ” ಎಂದು ಹೇಳುವೆನು.

ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ,

“ಇವರೇ ಶ್ರೇಷ್ಠರು, ಇವರೇ ನನಗೆ ಇಷ್ಟರಾದವರು” ಎಂದು ಹೇಳುವೆನು.

ಇತರ ದೇವರುಗಳನ್ನು ಅವಲಂಬಿಸಿದವರಿಗೆ ಬಹಳ ಕಷ್ಟನಷ್ಟಗಳು ಉಂಟಾಗುವವು.

ಅವರಂತೆ ನಾನು ರಕ್ತವನ್ನು ಪಾನದ್ರವ್ಯವಾಗಿ ಸಮರ್ಪಿಸುವುದೇ ಇಲ್ಲ;

ಅವರ ನಾಮಗಳನ್ನಾದರೂ ಉಚ್ಚರಿಸುವುದಿಲ್ಲ.

ನನ್ನ ಪಾಲೂ, ನನ್ನ ಪಾನವೂ ಯೆಹೋವನೇ,

ನೀನೇ ನನ್ನ ಸ್ವತ್ತನ್ನು ಭದ್ರಗೊಳಿಸುತ್ತೀ.

ನನಗೆ ಪ್ರಾಪ್ತವಾಗಿರುವ ಸ್ವತ್ತು ರಮಣೀಯವಾದದ್ದು;

ಅದು ನನಗೆ ಸಂತೃಪ್ತಿಕರವಾಗಿದೆ.

ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ;

ನಾನು ಆತನನ್ನು ಕೊಂಡಾಡುವೆನು.

ರಾತ್ರಿಯ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.

ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ;

ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ.

ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ;

ನನ್ನ ಮನವು ಉಲ್ಲಾಸಗೊಳ್ಳುತ್ತದೆ;

ನನ್ನ ಶರೀರವೂ ಸುರಕ್ಷಿತವಾಗಿರುವುದು.

ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ;

ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ.

ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ;

ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ;

ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.