Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಸಮು 9

ಸೌಲ ಮತ್ತು ಸಮುವೇಲರ ಭೇಟಿ

ಬೆನ್ಯಾಮೀನ್ ಕುಲದಲ್ಲಿ 1ಕೀಷನೆಂಬ ಒಬ್ಬ ಐಶ್ವರ್ಯವಂತ ಮತ್ತು ಪ್ರಭಾವಶಾಲಿಯಾದ ಮನುಷ್ಯನಿದ್ದನು. ಕೀಷನು ಅಬೀಯೇಲನ ಮಗ, ಅಬೀಯೇಲನು ಚೆರೋರನ ಮಗ, ಬೆಕೋರತನ ಮೊಮ್ಮಗ ಹಾಗೂ ಅಫೀಹನ ಮರಿಮಗನು. ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಈ ಸೌಲನು ಯೌವನಸ್ಥನೂ, ಎಲ್ಲಾ ಇಸ್ರಾಯೇಲ್ಯರಲ್ಲಿ ಅತಿಸುಂದರನೂ ಆಗಿದ್ದನು. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾಗಿದ್ದನು. ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ತಪ್ಪಿಸಿಕೊಂಡು ಹೋದುದರಿಂದ ಅವನು ತನ್ನ ಮಗನಾದ ಸೌಲನಿಗೆ, “ನೀನೆದ್ದು ಆಳುಗಳಲ್ಲಿ ಒಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕುವುದಕ್ಕೆ ಹೋಗು” ಎಂದು ಹೇಳಿದನು. ಅದರಂತೆಯೇ ಅವನು ಹೊರಟು ಎಫ್ರಾಯೀಮ್ ಪರ್ವತಪ್ರಾಂತ್ಯ, 2ಶಾಲಿಷಾ ದೇಶ ಇವುಗಳಲ್ಲಿ ಸಂಚರಿಸಿ ಹುಡುಕಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾಮೀನ್ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ. ಕಡೆಗೆ ಅವರು ಚೂಫ್ ದೇಶಕ್ಕೆ ಬಂದಾಗ ಸೌಲನು ತನ್ನ ಆಳಿಗೆ, “ಹಿಂದಿರುಗಿ ಹೋಗೋಣ ನಡಿ; ನಮ್ಮ ತಂದೆಯು ಈಗ ಕತ್ತೆಗಳ ಚಿಂತೆ ಬಿಟ್ಟು ನಮ್ಮ ಚಿಂತೆಯಲ್ಲಿರಬಹುದು” ಅಂದನು ಆದರೆ ಆ ಆಳು, “ಇಗೋ, ಈ ಪಟ್ಟಣದಲ್ಲಿ ಗೌರವಸ್ಥನಾದ 3ಒಬ್ಬ ದೇವರ ಮನುಷ್ಯನಿರುತ್ತಾನೆ. ಅವನು ನುಡಿಯುವುದೆಲ್ಲಾ ನೆರವೇರುತ್ತದೆ; ಅಲ್ಲಿಗೆ ಹೋಗೋಣ; ಒಂದು ವೇಳೆ ಅವನು ನಾವು ಹೋಗತಕ್ಕ ಮಾರ್ಗವನ್ನು ತಿಳಿಸುವನು” ಎಂದನು. ಅದಕ್ಕೆ ಸೌಲನು, “ನಾವು ಅವನ ಬಳಿಗೆ ಹೋಗಬೇಕಾದರೆ 4ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿಯು ಮುಗಿದುಹೋಯಿತು. ಆ ದೇವರ ಮನುಷ್ಯನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿಲ್ಲವಲ್ಲಾ; ಏನು ಕೊಡಬೇಕು?” ಎನ್ನಲು ಆಳು, “ಇಗೋ, ನನ್ನ ಕೈಯಲ್ಲಿ 5ಒಂದು ಪಾವಲಿಯಿದೆ; ಇದನ್ನು ಅವನಿಗೆ ಕೊಡೋಣ; ಅವನು ನಮಗೆ ಮಾರ್ಗ ತೋರಿಸುವನು” ಎಂದು ಉತ್ತರಕೊಟ್ಟನು. (ಪೂರ್ವ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ 6ದೈವೋತ್ತರ ಕೇಳಬೇಕಾದರೆ “ದೇವ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ” ಎನ್ನುವರು. ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು, ಆ ಕಾಲದಲ್ಲಿ 7ದೇವದರ್ಶಿಗಳೆಂದು ಕರೆಯುತ್ತಿದ್ದರು.) ಆಗ ಸೌಲನು ಆಳಿಗೆ, “ನೀನು ಹೇಳುವುದು ಒಳ್ಳೆಯದು; ಹೋಗೋಣ ನಡಿ” ಅಂದನು. ಅವರಿಬ್ಬರೂ ಗುಡ್ಡವನ್ನು ಹತ್ತಿ ದೇವರ ಮನುಷ್ಯನಿದ್ದ ಪಟ್ಟಣವನ್ನು ಸಮೀಪಿಸಲು ನೀರು ಸೇದುವುದಕ್ಕೋಸ್ಕರ ಊರ ಹೊರಗೆ ಬಂದಿದ್ದ ಸ್ತ್ರೀಯರನ್ನು ಕಂಡು, “ದರ್ಶಿಯು ಊರಲ್ಲಿದ್ದಾನೋ” ಎಂದು ಕೇಳಿದರು. ಅವರು, “ಇದ್ದಾನೆ; ಈ ಹೊತ್ತು ನಮ್ಮ ಊರಿನವರು 8ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ಅವನು ಈಗಲೇ ಇಲ್ಲಿಗೆ ಬಂದಿರುವನು; ಬೇಗನೆ ಹೋಗಿರಿ. ಅವನು ಯಜ್ಞಭೋಜನಕ್ಕೋಸ್ಕರ ಗುಡ್ಡಕ್ಕೆ ಹೋಗುವ ಮೊದಲು ನೀವು ಊರೊಳಕ್ಕೆ ಹೋದರೆ ಸಿಕ್ಕುವನು. ಅವನು ಅಲ್ಲಿಗೆ ಹೋಗುವ ವರೆಗೆ ಜನರು ಊಟಮಾಡುವುದಿಲ್ಲ. ಅವನು ಹೋಗಿ ಯಜ್ಞಾಹಾರವನ್ನು ಆಶೀರ್ವದಿಸುತ್ತಾನೆ. ಅನಂತರ ಕರೆಯಲ್ಪಟ್ಟವರು ಊಟಮಾಡುತ್ತಾರೆ. ಈಗಲೇ ಹೋಗಿರಿ. ಅವನು ಸಿಕ್ಕುವ ಸಮಯ ಇದೇ” ಅಂದರು. ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವುದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.

ಸೌಲನು ಬರುವುದಕ್ಕೆ ಒಂದು ದಿನ ಮುಂದಾಗಿ ಯೆಹೋವನು ಸಮುವೇಲನಿಗೆ, “ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನ್ ದೇಶದ ಒಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು. ನೀನು ಅವನನ್ನು ಇಸ್ರಾಯೇಲರ ನಾಯಕನನ್ನಾಗಿ ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು. 9ಅವರ ಕೂಗು ನನಗೆ ಮುಟ್ಟಿತು; ಅವರನ್ನು ಕಟಾಕ್ಷಿಸಿದ್ದೇನೆ” ಎಂದು ತಿಳಿಸಿದ್ದನು. ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ತಿಳಿಸಿದ್ದ ಮನುಷ್ಯನು ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು” ಎಂದು ಸೂಚಿಸಿದನು. ಊರಬಾಗಿಲಿಗೆ ಬಂದ ಸೌಲನು ತನ್ನ ಎದುರಿನಲ್ಲಿ ಸಮುವೇಲನನ್ನು ನೋಡಿ, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿಯೋ?” ಎನ್ನಲು ಸಮುವೇಲನು, “ನಾನೇ ಆ ದರ್ಶಿ. ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು. ಮೂರು ದಿನಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಇಸ್ರಾಯೇಲರ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು, ನಿನ್ನ ಮತ್ತು ನಿನ್ನ ತಂದೆಯ ಕುಟುಂಬದವರಿಗೂ ಸಲ್ಲುವುದು” ಎಂದು ಹೇಳಿದನು. ಅದಕ್ಕೆ ಸೌಲನು, “ನಾನು ಇಸ್ರಾಯೇಲ್ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್ ಕುಲದವನಲ್ಲವೋ? 10ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ?” ಎಂದನು. ಸಮುವೇಲನು ಸೌಲನನ್ನೂ ಅವನ ಸೇವಕನನ್ನೂ ಮಂಟಪಕ್ಕೆ ಕರೆದುಕೊಂಡು ಹೋದನು; ಭೋಜನಕ್ಕೆ ಬಂದಿದ್ದ ಸುಮಾರು ಮೂವತ್ತು ಜನರಲ್ಲಿ ಅವರಿಬ್ಬರಿಗೂ ಮುಖ್ಯಸ್ಥಾನವನ್ನು ಕೊಟ್ಟನು. ಅನಂತರ ಸಮುವೇಲನು ಅಡಿಗೆಯವನಿಗೆ, “ನಾನು ನಿನಗೆ ಹೇಳಿ ಪ್ರತ್ಯೇಕವಾಗಿ ಇಡಿಸಿದ್ದ ಮಾಂಸಭಾಗವನ್ನು ತಂದಿಡು” ಅಂದನು. ಅವನು 11ಒಂದು ತೊಡೆಯ ಮಾಂಸವನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಸೌಲನ ಮುಂದಿಟ್ಟನು. ಆಗ ಸಮುವೇಲನು, “ಇಗೋ, ಇದು ನಿನಗೋಸ್ಕರ ಪ್ರತ್ಯೇಕಿಸಿದ್ದು; ಇದನ್ನು ತಿನ್ನು, ಯಾಕೆಂದರೆ ಜನರನ್ನು ಭೋಜನಕ್ಕೆ ಕರೆದಾಗಿನಿಂದ ಇದು ನಿನಗೋಸ್ಕರವಾಗಿಯೇ ಇಡಲ್ಪಟ್ಟಿತ್ತು” ಎಂದು ಸೌಲನಿಗೆ ಹೇಳಿದನು. ಸೌಲನು ಆ ದಿನ ಸಮುವೇಲನ ಸಂಗಡ ಊಟಮಾಡಿದನು. ಅವರು ಗುಡ್ಡದಿಂದಿಳಿದು ಪಟ್ಟಣಕ್ಕೆ ಬಂದನಂತರ ಸಮುವೇಲನು ಸೌಲನನ್ನು ತನ್ನ 12ಮನೆಯ ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅವನೊಡನೆ ಮಾತನಾಡಿದನು.

ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, “ಏಳು, ನಿನ್ನನ್ನು ಕಳುಹಿಸಿ ಕೊಡುತ್ತೇನೆ” ಎಂದು ಎಬ್ಬಿಸಲು ಅವನು ಎದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ ಸಮುವೇಲನು ಸೌಲನಿಗೆ, “ನಿನ್ನ ಸೇವಕನನ್ನು ಮುಂದೆ ಕಳುಹಿಸಿ ನೀನು ಇಲ್ಲಿ ಸ್ವಲ್ಪ ನಿಲ್ಲು; ನಿನಗೆ ತಿಳಿಸಬೇಕಾದ ದೈವೋಕ್ತಿ ಒಂದುಂಟು” ಎಂದನು.

Source notes (12)
  1. Footnote 1ಪೂರ್ವ 9:39.
  2. Footnote 2 ಅರಸು. 4:42.
  3. Footnote ಧರ್ಮೋ 33:1.
  4. Footnote 1 ಅರಸು. 14:3
  5. Footnote ಪಾವಲಿ ಎಂದರೆ ಒಂದು ಬೆಳ್ಳಿ ನಾಣ್ಯದ ಕಾಲು ಭಾಗ.
  6. Footnote ಆದಿ 25:22.
  7. Footnote 1ಪೂರ್ವ 29:30.
  8. Footnote 1 ಅರಸು. 3:2-4.
  9. Footnote ವಿಮೋ 3:7, 9.
  10. Footnote ನ್ಯಾಯ 20:46.
  11. Footnote ಯಾಜ 7:32-33.
  12. Footnote ಮಾಳಿಗೆಯ ಮೇಲೆ ಸೌಲನಿಗಾಗಿ ಮಂಚವನ್ನು ಸಿದ್ಧಪಡಿಸಲಾಗಿತ್ತು ಅವನು ಅದರ ಮೇಲೆ ಮಲಗಿದ್ದನು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.