Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಸಮು 8

ಇಸ್ರಾಯೇಲರು ತಮಗೊಬ್ಬ ಅರಸನು ಬೇಕೆಂದು ಬೇಡಿಕೊಂಡಿದ್ದು

ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಾಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು. ಅವನ ಮೊದಲನೆಯ ಮಗನ ಹೆಸರು ಯೋವೇಲ್, ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಸ್ಥಾಪಕರಾಗಿದ್ದರು. ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು, ನ್ಯಾಯವಿರುದ್ಧವಾದ ತೀರ್ಪು ಕೊಡುತ್ತಿದ್ದರು. ಆದ್ದರಿಂದ ಇಸ್ರಾಯೇಲರ ಹಿರಿಯರೆಲ್ಲರೂ ಸೇರಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು ಅವನಿಗೆ, “ನೀನಂತೂ ಮುದುಕನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುತ್ತಿಲ್ಲ. 1ಆದ್ದರಿಂದ ಬೇರೆ ಎಲ್ಲಾ ಜನಾಂಗಗಳಿಗೆ ಇರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿಕೊಡು. ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ” ಅಂದರು. ನ್ಯಾಯಸ್ಥಾಪನೆಗೋಸ್ಕರ ನಮಗೊಬ್ಬ ಅರಸನನ್ನು ನೇಮಿಸಿಕೊಡು ಎಂಬ ಅವರ ಮಾತಿಗೆ ಸಮುವೇಲನು ದುಃಖಪಟ್ಟು ಯೆಹೋವನನ್ನು ಪ್ರಾರ್ಥಿಸಿದನು. ಆಗ ಯೆಹೋವನು ಸಮುವೇಲನಿಗೆ, “ಜನರು ಹೇಳಿದಂತೆಯೇ ಮಾಡು; 2ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆಯನ್ನು ಬೇಡವೆನ್ನುತ್ತಿದ್ದಾರೆ. ನಾನು ಅವರನ್ನು ಐಗುಪ್ತದಿಂದ ಬಿಡಿಸಿದಂದಿನಿಂದ ಇಂದಿನ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸಿದರು. ನನಗೆ ಹೇಗೆ ಮಾಡಿದರೋ, ಹಾಗೆಯೇ ನಿನಗೂ ಮಾಡುತ್ತಾರೆ. ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟೆಂಬುದನ್ನು ಅವರಿಗೆ ತಿಳಿಸಿ, ಎಚ್ಚರಿಸು” ಎಂದು ಹೇಳಿದನು.

ಸಮುವೇಲನು ಅರಸನನ್ನು ನೇಮಿಸಿಕೊಡು ಎಂದು ಬೇಡಿಕೊಂಡ ಜನರಿಗೆ ಯೆಹೋವನ ಮಾತುಗಳನ್ನೆಲ್ಲಾ ತಿಳಿಸಿ ಅವರಿಗೆ, “3ಅರಸನಿಗಿರುವ ಅಧಿಕಾರವೆಷ್ಟೆಂದು ಕೇಳಿರಿ, 4ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಗಳ ಮುಂದೆ ಓಡುವವರಾಗಬೇಕು. ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು. ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯ ಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು. 5ನಿಮ್ಮ ಉತ್ತಮವಾದ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಎಣ್ಣೇ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು. ನಿಮ್ಮ ಧಾನ್ಯ, ದ್ರಾಕ್ಷಿಗಳಲ್ಲಿ ಹತ್ತರಷ್ಟನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ, ಪರಿವಾರದವರಿಗೂ ಕೊಡುವನು. ನಿಮ್ಮ ದಾಸದಾಸಿಯರನ್ನೂ, ಉತ್ತಮವಾದ 6ಎತ್ತು ಕತ್ತೆಗಳನ್ನೂ ತನ್ನ ಕೆಲಸ ಮಾಡುವುದಕ್ಕಾಗಿ ತೆಗೆದುಕೊಳ್ಳುವನು. ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು. ನೀವು ಅವನಿಗೆ ದಾಸರಾಗಿರಬೇಕು. ಆಗ ನೀವು ಆರಿಸಿಕೊಂಡ ಅರಸನ ದೆಸೆಯಿಂದ ಆ ದಿನದಲ್ಲಿ ಬೇಸತ್ತು ಯೆಹೋವನಿಗೆ ಮೊರೆಯಿಡುವಿರಿ. 7ಆಗ ಆತನು ನಿಮ್ಮನ್ನು ಲಕ್ಷಿಸುವುದಿಲ್ಲ” ಅಂದನು. ಸಮುವೇಲನು ಎಷ್ಟು ಹೇಳಿದರೂ ಜನರು ಅವನ ಮಾತುಗಳನ್ನು ಕೇಳಲೊಲ್ಲದೆ, “ಇಲ್ಲ; ನಮಗೆ ಅರಸನನ್ನು ನೇಮಿಸಿಕೊಡು; ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ ನಮಗೆ ಮುಂದಾಗಿ ಹೊರಟು ನಮಗೋಸ್ಕರ ಯುದ್ಧಮಾಡುವ ಒಬ್ಬ ಅರಸನು ಬೇಕು” ಎಂದು ಹೇಳಿದರು. ಸಮುವೇಲನು ಜನರ ಈ ಎಲ್ಲಾ ಮಾತುಗಳನ್ನು ಯೆಹೋವನಿಗೆ ತಿಳಿಸಲಾಗಿ ಆತನು ಅವನಿಗೆ, “8ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು” ಎಂದನು. ಆಗ ಸಮುವೇಲನು ಇಸ್ರಾಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ” ಎಂದು ಅಪ್ಪಣೆಕೊಟ್ಟನು.

Source notes (8)
  1. Footnote ಅ.ಕೃ. 13:21.
  2. Footnote ವಿಮೋ 16:8.
  3. Footnote ಧರ್ಮೋ 17:16-20.
  4. Footnote 1. ಸಮು 14:52.
  5. Footnote 1. ಅರಸು. 21:7.
  6. Footnote ಅಕ್ಷರಶಃವಾಗಿ ಯುವಕರು.
  7. Footnote ಜ್ಞಾನೋ 1:28.
  8. Footnote ಹೋಶೇ. 13:11.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.