Biblica® Open Kannada Contemporary Version 2022
ಕೀರ್ತನೆಗಳು 120
ಯಾತ್ರಾ ಗೀತೆ.
ನನ್ನ ಇಕ್ಕಟ್ಟಿನಲ್ಲಿ ನಾನು ಯೆಹೋವ ದೇವರಿಗೆ ಕೂಗಿದೆನು;
ಅವರು ನನಗೆ ಉತ್ತರಕೊಟ್ಟರು.
ಯೆಹೋವ ದೇವರೇ, ನನ್ನ ಪ್ರಾಣವನ್ನು
ಸುಳ್ಳು ತುಟಿಯಿಂದಲೂ,
ಮೋಸದ ನಾಲಿಗೆಯಿಂದಲೂ ಬಿಡಿಸಿರಿ.
ಮೋಸದ ನಾಲಿಗೆಯೇ,
ದೇವರು ನಿನಗೆ ಏನು ಕೊಡಬೇಕು?
ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
ಪರಾಕ್ರಮಶಾಲಿಯ ಹದವಾದ ಬಾಣಗಳು
ಮತ್ತು ಜಾಲಿ ಮರದ ಕೆಂಡಗಳಿಂದ ನಿನಗೆ ಶಿಕ್ಷೆಯಾಗುವುದು.
ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ!
ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.
ನಾನು ಸಮಾಧಾನವನ್ನು ವಿರೋಧಿಸುವವರ
ಮಧ್ಯದಲ್ಲಿ ಬಹುಕಾಲ ಜೀವಿಸಬೇಕಾಯಿತು.
ನಾನು ಶಾಂತಿ ಪ್ರಿಯನು;
ಆದರೆ ನಾನು ಮಾತಾಡಿದರೆ ಅವರು ಯುದ್ಧಕ್ಕೆ ಬರುತ್ತಾರೆ.
Biblica® Open Kannada Contemporary Version 2022. Copyright © Biblica, Inc. Licensed under CC BY-SA 4.0. Source: Open.Bible. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-11-09.