Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಚೆಫನ್ಯ 2

ಅನ್ಯಜನರೊಂದಿಗೆ ಯೆಹೂದ ಮತ್ತು ಯೆರೂಸಲೇಮಿನ ತೀರ್ಪು

ಪಶ್ಚಾತ್ತಾಪಪಡಲು ಯೆಹೂದಕ್ಕೆ ಆದೇಶ

ನಾಚಿಕೆ ಇಲ್ಲದ ಜನಾಂಗದವರೇ,

ಒಟ್ಟಾಗಿ ಕೂಡಿಕೊಳ್ಳಿರಿ, ನೀವು ಒಟ್ಟಾಗಿ ಕೂಡಿಕೊಳ್ಳಿರಿ,

ತೀರ್ಪು ಕಾರ್ಯಗತಗೊಳ್ಳುವ ಮುಂಚೆ

ಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆ

ಯೆಹೋವ ದೇವರ ಉಗ್ರಕೋಪವು

ನಿಮ್ಮ ಮೇಲೆ ಬರುವ ಮುಂಚೆ,

ಯೆಹೋವ ದೇವರ ಕೋಪದ ದಿನವು

ನಿಮ್ಮ ಮೇಲೆ ಬರುವ ಮುಂಚೆ,

ದೇಶದ ದೀನರೇ, ಅವರ ಆಜ್ಞೆಗಳನ್ನು ಕೈಕೊಂಡು ನಡೆಯುವವರೆಲ್ಲರೇ

ಯೆಹೋವ ದೇವರನ್ನು ಹುಡುಕಿರಿ.

ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ.

ಒಂದು ವೇಳೆ ಯೆಹೋವ ದೇವರ ಕೋಪದ ದಿವಸದಲ್ಲಿ ಆಶ್ರಯ ಹೊಂದುವಿರಿ.

ಫಿಲಿಷ್ಟಿಯದ ವಿರೋಧವಾಗಿ

ಗಾಜವು ಕೈಬಿಡಲಾಗುವುದು;

ಅಷ್ಕೆಲೋನ್ ಹಾಳಾಗುವುದು;

ಅಷ್ಡೋದನ್ನು ಮಧ್ಯಾಹ್ನದಲ್ಲಿ ಖಾಲಿಮಾಡುವರು,

ಎಕ್ರೋನ್ ಕಿತ್ತೆಸೆಯಲಾಗುವುದು.

ಅಯ್ಯೋ, ಕರಾವಳಿಯಲ್ಲಿ ವಾಸಿಸುವ

ಕೆರೇತ್ಯ ಜನಾಂಗವೇ,

ನಿನ್ನ ಗತಿಯನ್ನು ಏನು ಹೇಳಲಿ!

ಕಾನಾನೇ, ಫಿಲಿಷ್ಟಿಯ ದೇಶವೇ,

ಯೆಹೋವ ದೇವರ ವಾಕ್ಯವು ನಿನಗೆ ವಿರುದ್ಧವಾಗಿದೆ,

“ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು,”

ಎಂದು ಅವರು ಹೇಳುತ್ತಾರೆ.

ಸಮುದ್ರದ ತೀರವು

ಕುರುಬರು ಮೇಯಿಸುವ ಸ್ಥಳಗಳಾಗಿಯೂ

ಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು.

ಅದು ಯೆಹೂದದ ಮನೆತನದಲ್ಲಿ

ಉಳಿದವರ ವಶವಾಗುವುದು.

ಅದರ ಮೇಲೆ ಮೇಯಿಸುವರು.

ಅಷ್ಕೆಲೋನಿನ ಮನೆತನಗಳಲ್ಲಿ

ಸಾಯಂಕಾಲದಲ್ಲಿ ಅವರು ಮಲಗಿಕೊಳ್ಳುವರು.

ಏಕೆಂದರೆ ಅವರ ದೇವರಾದ ಯೆಹೋವ ದೇವರು,

ಅವರನ್ನು ಪರಿಪಾಲಿಸಿ, ಮತ್ತೆ ಏಳಿಗೆಗೆ ತರುವರು.

ಅಮ್ಮೋನು ಮತ್ತು ಮೋವಾಬುಗಳ ವಿರೋಧವಾಗಿ

“ಮೋವಾಬಿನ ನಿಂದೆಯನ್ನೂ

ಅಮ್ಮೋನ್ಯರ ಬೈಗಳವನ್ನೂ

ಅವರು ನನ್ನ ಜನರನ್ನೂ ನಿಂದಿಸಿ,

ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ.

ಆದ್ದರಿಂದ ಇಸ್ರಾಯೇಲಿನ ದೇವರಾದ

ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ:

ನನ್ನ ಜೀವದಾಣೆ,”

“ನಿಶ್ಚಯವಾಗಿ ಮೋವಾಬು ಸೊದೋಮಿನ

ಅಮ್ಮೋನ್ಯರು ಗೊಮೋರದ ಹಾಗೆ ಆಗುವುದು.

ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಳಿಗಳುಳ್ಳಂಥ

ನಿತ್ಯವಾಗಿ ಹಾಳಾದ ಸ್ಥಳವಾಗುವರು.

ನನ್ನ ಜನರಲ್ಲಿ ಉಳಿದವರು ಅವರನ್ನು ಸುಲಿದುಕೊಳ್ಳುವರು.

ನನ್ನ ಜನರಲ್ಲಿ ಮಿಕ್ಕಾದವರು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.”

ಅವರು ಸೇನಾಧೀಶ್ವರ ಯೆಹೋವ ದೇವರ ಜನರನ್ನು

ಅವಮಾನಿಸಿ ಮತ್ತು ಅಪಹಾಸ್ಯ ಮಾಡಿದ್ದರಿಂದಲೇ

ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವುದು.

ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ,

ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು.

ಇತರ ಜನಾಂಗಗಳ ದ್ವೀಪಗಳವರೆಲ್ಲರು

ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.

ಕೂಷ್ಯರ ವಿರೋಧವಾಗಿ

ಕೂಷ್ ದೇಶದವರೇ, ನೀವೂ ಸಹ

ನನ್ನ ಖಡ್ಗದಿಂದ ಹತರಾಗುವಿರಿ.

ಅಸ್ಸೀರಿಯ

ಅವರು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ,

ಅಸ್ಸೀರಿಯರನ್ನು ನಾಶಮಾಡಿ

ನಿನೆವೆಯನ್ನು ಹಾಳಾಗಿಯೂ

ಮರುಭೂಮಿಯಂತೆ ಒಣಗಿದ್ದಾಗಿಯೂ ಮಾಡುವರು.

ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ

ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು,

ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆ

ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು.

ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು,

ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು,

ದೇವದಾರು ಮರದ ತೊಲೆಗಳು ಕಳಚಿಬೀಳುವುವು.

“ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,”

ಎಂದು ತನ್ನೊಳಗೆ ಎಂದುಕೊಂಡಂಥ

ಸುಭದ್ರ ನಿನೆವೆ ಪಟ್ಟಣವು ಇದೇ.

ಅದು ಎಷ್ಟೋ ಹಾಳಾಯಿತು;

ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು.

ಅದರಲ್ಲಿ ಹಾದುಹೋಗುವವರೆಲ್ಲರೂ

ನಿಂದಿಸಿ ಅಪಹಾಸ್ಯ ಮಾಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.