Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಜೆಕರ್ಯ 3

ಮಹಾಯಾಜಕನಿಗಾಗಿ ಶುದ್ಧ ಬಟ್ಟೆಗಳು

ಆತನು ನನಗೆ, ಯೆಹೋವ ದೇವರ ದೂತನ ಮುಂದೆ ನಿಂತಿರುವ ಮಹಾಯಾಜಕನಾದ ಯೆಹೋಶುವನನ್ನೂ, ಅವನ ಮೇಲೆ ದೂರು ಹೇಳುವುದಕ್ಕೆ ಅವನ ಬಲಗಡೆಯಲ್ಲಿ ನಿಂತ ಸೈತಾನನನ್ನೂ ತೋರಿಸಿದನು. ಆಗ ಯೆಹೋವ ದೇವರ ದೂತನು ಸೈತಾನನಿಗೆ, “ಸೈತಾನನೇ, ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಯೆರೂಸಲೇಮನ್ನು ಆಯ್ದುಕೊಂಡ ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಅದು ಬೆಂಕಿಯೊಳಗಿಂದ ಎಳೆದ ಕೊಳ್ಳಿಯಾಗಿದೆಯಲ್ಲವೋ?” ಎಂದನು.

ಯೆಹೋಶುವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವನಾಗಿ ದೇವದೂತನ ಮುಂದೆ ನಿಂತನು. ಆಗ ದೇವದೂತನು ತನ್ನ ಮುಂದೆ ನಿಂತವರಿಗೆ, “ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದುಹಾಕಿರಿ,” ಎಂದನು.

ಅನಂತರ ಯೆಹೋಶುವನಿಗೆ, “ನಿನ್ನ ಪಾಪವನ್ನು ತೆಗೆದುಹಾಕಿದ್ದೇನೆ. ಬದಲಾಗಿ ಶ್ರೇಷ್ಠ ವಸ್ತ್ರಗಳನ್ನು ನಿನಗೆ ತೊಡಿಸುವೆನು,” ಎಂದನು.

ಆಗ ನಾನು, “ಅವನ ತಲೆಯ ಮೇಲೆ ಶುದ್ಧ ಮುಂಡಾಸನ್ನು ಇಡಿರಿ,” ಎಂದೆನು. ಆಗ ಸೇವಕರು ಯೆಹೋಶುವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು, ಅವನಿಗೆ ವಸ್ತ್ರಗಳನ್ನು ಧರಿಸಿದರು. ಯೆಹೋವ ದೇವರ ದೂತನು ಪಕ್ಕದಲ್ಲಿ ನಿಂತಿದ್ದನು.

ಆಗ ಯೆಹೋವ ದೇವರ ದೂತನು ಯೆಹೋಶುವನಿಗೆ ಸಾಕ್ಷಿ ಕೊಟ್ಟಿದ್ದೇನೆಂದರೆ, “ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಗಳನ್ನು ಕೈಗೊಂಡರೆ, ಆಗ ನೀನು ನನ್ನ ಆಲಯಕ್ಕೂ ನ್ಯಾಯತೀರಿಸಿ, ನನ್ನ ಅಂಗಳಗಳನ್ನೂ ಕಾಯುವೆ. ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ಹಕ್ಕನ್ನು ನಿನಗೆ ಕೊಡುವೆನು.’

“ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ. ಅವರು ಆಶ್ಚರ್ಯವನ್ನುಂಟುಮಾಡುವ ಮನುಷ್ಯರಾಗಿದ್ದಾರೆ. ನಾನು ‘ರೆಂಬೆ’ ಎಂಬ ನನ್ನ ಸೇವಕನನ್ನು ಬರಮಾಡುವೆನು ಎಂಬುದಕ್ಕೆ ಇವರೇ ಮುಂಗುರುತು. ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವಂತೆ ನಾನು ಅದರ ಮೇಲೆ ಒಂದು ಶಾಸನವನ್ನು ಕೆತ್ತಿಸುವೆನು. ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆ ದೇಶದ ಅಪರಾಧವನ್ನು ಒಂದೇ ದಿವಸದಲ್ಲಿ ತೊಲಗಿಸುವೆನು.

“ ‘ಆ ದಿವಸದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷಿಬಳ್ಳಿಯ ಕೆಳಗೂ, ಅಂಜೂರದ ಮರದ ಕೆಳಗೂ ಕರೆಯುವಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.