Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಜೆಕರ್ಯ 10
ಯೆಹೋವ ದೇವರು ಯೆಹೂದವನ್ನು ಕರುಣಿಸುವನು
ಯೆಹೋವ ದೇವರಿಂದ ಹಿಂಗಾರು ಮಳೆಯ ಕಾಲದಲ್ಲಿ, ಮಳೆಯನ್ನು ಬೇಡಿಕೊಳ್ಳಿರಿ.
ಹೀಗೆ ಯೆಹೋವ ದೇವರು ಮಿಂಚುವ ಮೋಡಗಳನ್ನು ಮಾಡಿ,
ಅವರಿಗೆ ಸಮೃದ್ಧಿಯಾದ ಮಳೆಯನ್ನೂ,
ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವರು.
ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು.
ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು.
ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ.
ವ್ಯರ್ಥವಾಗಿ ಆದರಿಸುತ್ತಾರೆ,
ಆದ್ದರಿಂದ ಕುರಿಗಳಂತೆ ಚದರಿದ್ದಾರೆ,
ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.
“ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯುತ್ತಿದೆ.
ನಾಯಕರನ್ನು ದಂಡಿಸುವೆನು.
ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ತಮ್ಮ ಮಂದೆಯಾಗಿರುವ
ಯೆಹೂದನ ಮನೆತನದವರನ್ನು ಪರಿಪಾಲಿಸಿ,
ಅವರನ್ನು ಯುದ್ಧದಲ್ಲಿ ತಮ್ಮ ಘನವಾದ ಕುದುರೆಯ ಹಾಗೆ ಮಾಡಿದ್ದಾರೆ.
ಆ ಕುಲದಿಂದಲೇ ಮೂಲೆಗಲ್ಲೂ,
ಗುಡಾರದ ಮೊಳೆಯೂ,
ಯುದ್ಧದ ಬಿಲ್ಲೂ,
ಸಕಲ ಅಧಿಕಾರಿಗಳೂ ಕೂಡಿಕೊಂಡು ಹೊರಬರುವರು.
ಅವರು ಯುದ್ಧದಲ್ಲಿ
ಶತ್ರುವನ್ನು ಕೆಸರಿನ ಬೀದಿಗಳಲ್ಲಿ ತುಳಿಯುವ ಶೂರರ ಹಾಗಿರುವರು.
ಯೆಹೋವ ದೇವರು ಅವರ ಸಂಗಡ ಇರುವುದರಿಂದ ಯುದ್ಧಮಾಡುವರು.
ಕುದುರೆಗಳ ಮೇಲೆ ಸವಾರಿ ಮಾಡುವ ಶತ್ರುವನ್ನು ನಾಚಿಕೆ ಪಡಿಸುವರು.
“ನಾನು ಯೆಹೂದ ವಂಶವನ್ನು ಬಲಪಡಿಸಿ, ಯೋಸೇಫ ಗೋತ್ರವನ್ನು ರಕ್ಷಿಸುವೆನು.
ಅವರನ್ನು ಕನಿಕರಿಸುವುದರಿಂದ
ಅವರನ್ನು ತಿರುಗಿ ಬರಮಾಡುವೆನು.
ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಇರುವರು.
ಏಕೆಂದರೆ ನಾನೇ ಅವರ ದೇವರಾದ ಯೆಹೋವ ದೇವರಾಗಿದ್ದು,
ಅವರಿಗೆ ಉತ್ತರಕೊಡುವೆನು.
ಎಫ್ರಾಯೀಮಿನವರು ಶೂರರಂತೆ ಇರುವರು.
ಅವರ ಹೃದಯವು ದ್ರಾಕ್ಷಾರಸ ಕುಡಿದವರಂತೆ ಸಂತೋಷಪಡುವುದು.
ಅವರ ಮಕ್ಕಳು ಇದನ್ನು ಕಂಡು ಸಂತೋಷಿಸುವರು.
ಅವರ ಹೃದಯವು ಯೆಹೋವ ದೇವರಲ್ಲಿ ಆನಂದಿಸುವುದು.
ನಾನು ಅವರಿಗೆ ಸಿಳ್ಳುಹಾಕಿ,
ಅವರನ್ನು ಕೂಡಿಸುವೆನು.
ನಿಶ್ಚಯವಾಗಿ ಅವರನ್ನು ವಿಮೋಚಿಸಿದ್ದೇನೆ.
ಅವರು ಹಿಂದಿನಂತೆ ಮುಂದೆಯೂ ಸಮೃದ್ಧಿಯಾಗಿರುವರು.
ನಾನು ಅವರನ್ನು ಜನಗಳಲ್ಲಿ ಚದುರಿಸಿದರೂ
ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡಿಕೊಳ್ಳುವರು.
ತಮ್ಮ ಮಕ್ಕಳ ಸಂಗಡ ಬದುಕಿ
ಮತ್ತೆ ತಿರುಗಿಕೊಳ್ಳುವರು.
ಈಜಿಪ್ಟ್ ದೇಶದೊಳಗಿಂದ ಸಹ ಅವರನ್ನು ತಿರುಗಿ ತರುವೆನು.
ಅಸ್ಸೀರಿಯದೊಳಗಿಂದ ಅವರನ್ನು ಕೂಡಿಸುವೆನು.
ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು.
ಅವರಿಗೆ ಸ್ಥಳ ಸಾಲದೆ ಇರುವುದು.
ಅವರು ಕಷ್ಟವೆಂಬ ಕಡಲನ್ನು ದಾಟುವರು.
ಸಮುದ್ರದಲ್ಲಿ ತೆರೆಗಳನ್ನು ಬಡಿಯುವರು.
ನೈಲ್ ನದಿಯ ಅಗಾಧಗಳೆಲ್ಲಾ ಒಣಗುವುವು.
ಅಸ್ಸೀರಿಯದ ಗರ್ವವು ತಗ್ಗಿಹೋಗುವುದು.
ಈಜಿಪ್ಟಿನ ರಾಜದಂಡವು ಗತಿಸುವುದು.
ಯೆಹೋವ ದೇವರಲ್ಲಿ ನಾನು ಅವರನ್ನು ಬಲಪಡಿಸುವೆನು.
ದೇವರ ಹೆಸರಿನಲ್ಲಿ ಅವರು ಸುರಕ್ಷಿತರಾಗಿ ಬಾಳುವರು,”
ಎಂದು ಯೆಹೋವ ದೇವರು ಹೇಳುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.