Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಪರಮಗೀತೆ 8
ನೀನು ನನ್ನ ತಾಯಿಯ ಹಾಲು ಕುಡಿದ
ನನ್ನ ಅಣ್ಣನಾಗಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು!
ನಾನು ನಿನ್ನನ್ನು ಕಂಡು ಹೊರಗೆಯೇ
ನಿನಗೆ ಮುದ್ದಿಡುತ್ತಿದ್ದೆ.
ಆಗ ಯಾರೂ ನನ್ನನ್ನು ನಿಂದಿಸುತ್ತಿರಲಿಲ್ಲ.
ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು.
ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು.
ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು.
ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು.
ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ.
ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
ಯೆರೂಸಲೇಮಿನ ಪುತ್ರಿಯರೇ,
ಮೆಚ್ಚುವ ಕಾಲಕ್ಕೆ ಮುಂಚೆ
ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ,
ಎಚ್ಚರಿಸಲೂ ಬೇಡಿರಿ ಎಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಸ್ನೇಹಿತರು
ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ
ಇವಳು ಯಾರು?
ಪ್ರಿಯತಮೆ
ಸೇಬುಗಿಡದ ಕೆಳಗೆ ನಿನ್ನನ್ನು ಪ್ರೇರಿಸಿದೆನು.
ಅದು ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ ಸ್ಥಳ.
ಅಲ್ಲಿ ನಿನ್ನ ತಾಯಿ ಪ್ರಸವವೇದನೆಯಿಂದ ನಿನ್ನನ್ನು ಹಡೆದಳು.
ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ.
ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ.
ಪ್ರೀತಿಯು ಮರಣದಷ್ಟು ಬಲವಾಗಿದೆ.
ಮತ್ಸರವು ಸಮಾಧಿಯಷ್ಟು ಕ್ರೂರ.
ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ
ಜ್ವಾಲೆಯ ಹಾಗಿರುವುದು.
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು.
ಪ್ರವಾಹಗಳು ಸಹ ಪ್ರೀತಿಯನ್ನು ಮುಳುಗಿಸಲಾರವು.
ಒಬ್ಬನು ತನ್ನ ಆಸ್ತಿಯನ್ನೆಲ್ಲಾ
ಪ್ರೀತಿಗೋಸ್ಕರ ಕೊಟ್ಟರೂ,
ಆ ಪ್ರೀತಿಗೆ ಬದಲಾಗಿ ಅಂಥವನಿಗೆ ಸಂಪೂರ್ಣ ನಿಂದೆಯೇ ಸಿಗುವುದು.
ಸ್ನೇಹಿತರು
ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ.
ಅವಳನ್ನು ಮದುವೆಗಾಗಿ ಮಾತಾಡಲು
ಯಾರಾದರೂ ಬಂದರೆ, ನಾವೇನು ಮಾಡೋಣ?
ಅವಳು ಗೋಡೆಯಾದರೆ,
ನಾವು ಅವಳ ಮೇಲೆ ಬೆಳ್ಳಿಯ ಗೋಪುರವನ್ನು ಕಟ್ಟುವೆವು.
ಅವಳು ಬಾಗಿಲಾದರೆ,
ದೇವದಾರು ಹಲಿಗೆಗಳಿಂದ ಅವಳನ್ನು ಭದ್ರಪಡಿಸುವೆವು.
ಪ್ರಿಯತಮೆ
ನಾನು ಗೋಡೆಯಂಥವಳೇ,
ನನ್ನ ಯೌವನವು ಬುರುಜುಗಳು.
ಹೀಗೆ ನಾನು ಅವನ ದೃಷ್ಟಿಯಲ್ಲಿ
ಸಮಾಧಾನ ಹೊಂದುವೆನು.
ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು.
ಅವನು ಆ ದ್ರಾಕ್ಷಿತೋಟವನ್ನು ರೈತರಿಗೆ ಗುತ್ತಿಗೆಗೆ ಕೊಟ್ಟನು.
ಪ್ರತಿಯೊಬ್ಬ ಗುತ್ತಿಗೆಗಾರನು ಅದರ ಫಲದಿಂದ
ಸಾವಿರ ಬೆಳ್ಳಿಯ ನಾಣ್ಯಗಳನ್ನು1 ತರಬೇಕಾಗಿತ್ತು.
ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ.2
ತೋಟದ ಫಲವನ್ನು ಕಾಪಾಡುವವರಿಗೆ ಇನ್ನೂರು ಬೆಳ್ಳಿನಾಣ್ಯಗಳು ಸೇರಲಿ.
ಆದರೆ ನನ್ನ ದ್ರಾಕ್ಷಿತೋಟ ನನಗೇ ಇರಲಿ.
ಪ್ರಿಯಕರ
ತೋಟಗಳಲ್ಲಿ ವಾಸವಾಗಿರುವಳೇ,
ಸ್ನೇಹಿತರು ನನ್ನ ಸಂಗಡ ಇದ್ದಾರೆ.
ನಾನು ನಿನ್ನ ಧ್ವನಿಯನ್ನು ಕೇಳ ಮಾಡು!
ಪ್ರಿಯತಮೆ
ನನ್ನ ಪ್ರಿಯನೇ,
ಸುಗಂಧ ಸಸ್ಯ ಪರ್ವತಗಳ ಮೇಲಿರುವ
ಜಿಂಕೆಯಂತೆಯೂ, ಪ್ರಾಯದ ಹುಲ್ಲೆಯಂತೆಯೂ
ನೀನು ಬೇಗ ಬಾ.
Source notes (2)
- Footnote ಸುಮಾರು 12 ಕಿಲೋಗ್ರಾಂ
- Footnote ಸುಮಾರು 2.3 ಕಿಲೋಗ್ರಾಂ
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.