Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಪರಮಗೀತೆ 3

ರಾತ್ರಿಯೆಲ್ಲಾ ನನ್ನ ಹಾಸಿಗೆಯ ಮೇಲಿದ್ದೆನು;

ನನ್ನ ಪ್ರಾಣ ಪ್ರಿಯನನ್ನು ಹುಡಕಿದೆನು. ಅವನನ್ನು ಎಷ್ಟು ಹುಡುಕಿದರೂ

ಅವನು ಸಿಗಲಿಲ್ಲ.

ನಾನು ಎದ್ದು, ಪಟ್ಟಣವನ್ನು ಸಂಚರಿಸಿ,

ಬೀದಿಗಳಲ್ಲಿಯೂ, ಮಾರ್ಗಗಳಲ್ಲಿಯೂ

ನನ್ನ ಪ್ರಾಣ ಪ್ರಿಯನನ್ನು ಹುಡುಕಾಡಿದೆನು.

ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲೇ ಇಲ್ಲ.

ನಾನು ಪಟ್ಟಣವನ್ನು ಕಾಯುವ

ಕಾವಲುಗಾರರಿಗೆ ಸಿಕ್ಕಿಬಿದ್ದಾಗ,

“ನನ್ನ ಪ್ರಾಣ ಪ್ರಿಯನನ್ನು ನೀವು ಕಂಡಿರಾ?” ಎಂದು ವಿಚಾರಿಸಿದೆ.

ನಾನು ಅವರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ,

ನನ್ನ ಪ್ರಾಣ ಪ್ರಿಯನನ್ನು ಕಂಡುಕೊಂಡೆನು.

ನಾನು ಅವನ ಕೈಯನ್ನು ಹಿಡಿದುಕೊಂಡು ನನ್ನ ತಾಯಿಯ ಮನೆಗೆ,

ಹೌದು, ನನ್ನ ಹೆತ್ತವಳ ಕೋಣೆಗೆ

ಅವನನ್ನು ಬಿಡದೆ ಕರೆದುಕೊಂಡು ಹೋದೆನು.

ಯೆರೂಸಲೇಮಿನ ಪುತ್ರಿಯರೇ,

ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ.

ಎಚ್ಚರಿಸಲೂ ಬೇಡಿರಿ ಎಂದು

ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

ರಕ್ತಬೋಳ, ಸಾಂಬ್ರಾಣಿಗಳಿಂದಲೂ

ವರ್ತಕರು ಮಾರುವ ಸಕಲ ಸುಗಂಧ ದ್ರವ್ಯಗಳಿಂದಲೂ

ಧೂಮಸ್ತಂಭಗಳಂತೆ ಅಡವಿಯಿಂದ ಬರುವ ಈ ಮೆರವಣೆಗೆ ಯಾರದು?

ನೋಡಿರಿ! ಇದು ಸೊಲೊಮೋನನ ರಥ.

ಇಸ್ರಾಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು

ಮಂದಿ ಅದರ ಸುತ್ತಲಿದ್ದಾರೆ.

ಯುದ್ಧ ನಿಪುಣರಾದ ಅವರೆಲ್ಲರೂ

ಖಡ್ಗ ಹಿಡಿದಿದ್ದಾರೆ.

ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬರೂ

ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾರೆ.

ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ

ಒಂದು ರಥವನ್ನು ತನಗೆ ಮಾಡಿಸಿಕೊಂಡಿದ್ದನು.

ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ

ಅದರ ಕೆಳಗಿನ ಭಾಗವನ್ನು ಬಂಗಾರದಿಂದಲೂ

ಅದರ ಹೊದಿಕೆಯನ್ನು

ಧೂಮ್ರವರ್ಣದ ವಸ್ತ್ರದಿಂದಲೂ ಮಾಡಿಸಿದ್ದನು.

ಯೆರೂಸಲೇಮಿನ ಪುತ್ರಿಯರು ಪ್ರೀತಿಯಿಂದ ಅದನ್ನು ಅಲಂಕರಿಸಿದ್ದರು.

ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ.

ಅರಸನಾದ ಸೊಲೊಮೋನನನ್ನು ನೋಡಿರಿ.

ಅವನ ಮದುವೆಯ ದಿನದಂದು,

ಅವನ ಹೃದಯ ಸಂತೋಷಗೊಂಡ ದಿನದಲ್ಲಿ,

ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.