Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಪ್ರಕಟನೆ 4

ಪರಲೋಕದಲ್ಲಿರುವ ಸಿಂಹಾಸನ

ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು. ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು. ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು. ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು. ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು. ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು.

ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು. ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು:

“ ‘ದೇವರು ಆಗಿರುವ ಕರ್ತ ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು,

ಅವರು ಸರ್ವಶಕ್ತರು,’1

ಗತಕಾಲ, ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಇರುವವರು.”

ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ, ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,

“ನಮ್ಮ ಕರ್ತ ಆಗಿರುವ ದೇವರೇ,

ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ.

ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ.

ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು,

ನಿಮ್ಮ ಚಿತ್ತದಿಂದಲೇ ಇದ್ದವು,”

ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.

Source notes (1)
  1. Footnote ಯೆಶಾಯ 6:3

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.