Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಪ್ರಕಟನೆ 15
ಏಳುಮಂದಿ ದೂತರು, ಏಳು ಉಪದ್ರವಗಳು
ನಾನು ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ಕಂಡೆನು. ಏಳುಮಂದಿ ದೂತರಲ್ಲಿ ಕಡೆಯ ಏಳು ಉಪದ್ರವಗಳಿದ್ದವು. ಏಕೆಂದರೆ, ಅವುಗಳಲ್ಲಿ ದೇವರ ಕೋಪವು ಸಂಪೂರ್ಣವಾಗುವುದು. ನನಗೆ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಒಂದು ಕಾಣಿಸಿತು. ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಹೆಸರಿನ ಸಂಖ್ಯೆಯ ಮೇಲೆಯೂ ಜಯಹೊಂದಿದವರು ದೇವರ ಕಿನ್ನರಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಗಾಜಿನ ಸಮುದ್ರದ ಮೇಲೆ ನಿಂತುಕೊಂಡು, ದೇವರ ದಾಸನಾದ ಮೋಶೆಯ ಮತ್ತು ಕುರಿಮರಿ ಆಗಿರುವವರ ಹಾಡನ್ನೂ ಹಾಡುತ್ತಾ:
“ಕರ್ತ ಆಗಿರುವ ಸರ್ವಶಕ್ತ ದೇವರೇ,
ನಿಮ್ಮ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯವಾದವುಗಳೂ ಆಗಿವೆ.
ರಾಷ್ಟ್ರಗಳ ಅರಸರಾಗಿರುವ
ನಿಮ್ಮ ಮಾರ್ಗಗಳು ನೀತಿಯುಳ್ಳವೂ ಸತ್ಯವೂ ಆಗಿವೆ.
ಕರ್ತನೇ, ನಿನಗೆ ಭಯಪಡದವರೂ
ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರು?
ಏಕೆಂದರೆ ನೀನೊಬ್ಬನೇ ಪರಿಶುದ್ಧನು.
ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಟವಾದ್ದರಿಂದ
ಎಲ್ಲಾ ರಾಷ್ಟ್ರಗಳವರು ಬಂದು,
ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು,”1
ಎಂದು ಹೇಳಿದರು.
ಇದಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿರುವ ಸಾಕ್ಷಿಯ ಗುಡಾರದ ದೇವಾಲಯವು ತೆರೆದಿರುವುದನ್ನು ಕಂಡೆನು. ಆ ದೇವಾಲಯದೊಳಗಿಂದ ಏಳು ಉಪದ್ರವಗಳನ್ನು ಹಿಡಿದು, ಆ ಏಳು ದೇವದೂತರು ಬಂದರು. ಅವರು ಪ್ರಕಾಶಮಯವಾದ ಶುಭ್ರವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ತಮ್ಮ ಎದೆಗಳಿಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. ನಾಲ್ಕು ಜೀವಿಗಳಲ್ಲಿ ಒಂದು, ಆ ಏಳು ದೂತರಿಗೆ, ಯುಗಯುಗಾಂತರಗಳಲ್ಲಿಯೂ ಜೀವಿಸುವವರಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು. ದೇವರ ಮಹಿಮೆಯಿಂದಲೂ ಅವರ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ದೇವಾಲಯವು ಆವರಿಸಿದ ಕಾರಣ, ಆ ಏಳುಮಂದಿ ದೇವದೂತರ ಏಳು ಉಪದ್ರವಗಳು ತೀರುವ ತನಕ, ಆ ದೇವಾಲಯದೊಳಗೆ ಪ್ರವೇಶಿಸುವುದಕ್ಕೆ ಯಾರಿಗೂ ಆಗಲಿಲ್ಲ.
Source notes (1)
- Footnote ಕೀರ್ತನೆ 111:2,3; ಧರ್ಮೋ 32:4; ಯೆರೆ 10:7; ಕೀರ್ತನೆ 86:9; 98:2
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.