Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 99

ಯೆಹೋವ ದೇವರು ಆಳಿಕೆ ಮಾಡುತ್ತಾರೆ.

ರಾಷ್ಟ್ರಗಳು ನಡುಗಲಿ.

ಅವರು ಕೆರೂಬಿಗಳ ಮಧ್ಯದಲ್ಲಿ ಕೂತಿದ್ದಾರೆ.

ಭೂಮಿಯು ಕದಲಲಿ.

ಯೆಹೋವ ದೇವರು ಚೀಯೋನಿನಲ್ಲಿ ಮಹೋನ್ನತರಾಗಿದ್ದಾರೆ.

ಎಲ್ಲಾ ಜನಗಳ ಮೇಲೆ ಉನ್ನತರಾಗಿದ್ದಾರೆ.

ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ.

ದೇವರು ಪರಿಶುದ್ಧರು.

ನ್ಯಾಯ ಪ್ರಿಯ ರಾಜರೇ,

ನೀವು ನೀತಿಯನ್ನು ಸ್ಥಿರಪಡಿಸುತ್ತೀರಿ.

ನ್ಯಾಯವನ್ನೂ ನೀತಿಯನ್ನೂ

ಯಾಕೋಬ್ಯರಲ್ಲಿ ನೀವು ಮನದಟ್ಟಾಗಿಸಿರುವಿರಿ.

ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ.

ಅವರ ಪಾದಪೀಠದಲ್ಲಿ ಆರಾಧಿಸಿರಿ.

ಏಕೆಂದರೆ ಅವರು ಪರಿಶುದ್ಧರಾಗಿದ್ದಾರೆ.

ಯೆಹೋವ ದೇವರ ಯಾಜಕರಲ್ಲಿ ಮೋಶೆಯೂ ಆರೋನನೂ ಇದ್ದಾರೆ.

ದೇವರ ಹೆಸರೆತ್ತಿ ಕರೆದವರಲ್ಲಿ ಸಮುಯೇಲನೂ ಸಹ ಒಬ್ಬನು.

ಇವರೆಲ್ಲರೂ ಯೆಹೋವ ದೇವರನ್ನು ಕರೆದರು.

ದೇವರು ಅವರಿಗೆ ಉತ್ತರಕೊಟ್ಟರು.

ಮೇಘಸ್ತಂಭದಿಂದ ಅವರ ಸಂಗಡ ಮಾತನಾಡಿದರು.

ದೇವರು ಅವರಿಗೆ ಕೊಟ್ಟ ಶಾಸನಗಳನ್ನೂ ತೀರ್ಪುಗಳನ್ನೂ ಅವರು ಕೈಗೊಂಡರು.

ನಮ್ಮ ದೇವರಾದ ಯೆಹೋವ ದೇವರೇ,

ನೀವು ಅವರಿಗೆ ಉತ್ತರಕೊಟ್ಟಿದ್ದೀರಿ.

ನೀವು ದುಷ್ಕೃತ್ಯಗಳಿಗಾಗಿ ಇಸ್ರಾಯೇಲರನ್ನು ದಂಡಿಸಿದರೂ

ಅವರನ್ನು ಕ್ಷಮಿಸುವ ದೇವರಾಗಿದ್ದೀರಿ.

ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ.

ದೇವರ ಪರಿಶುದ್ಧ ಪರ್ವತದಲ್ಲಿ ಆರಾಧಿಸಿರಿ.

ನಮ್ಮ ದೇವರಾದ ಯೆಹೋವ ದೇವರು ಪರಿಶುದ್ಧರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.