Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 90

ಭಾಗ 4

ಕೀರ್ತನೆಗಳು 90–106

ದೇವರ ಮನುಷ್ಯನಾದ ಮೋಶೆಯ ಪ್ರಾರ್ಥನೆ.

ಯೆಹೋವ ದೇವರೇ, ತಲತಲಾಂತರಗಳಲ್ಲಿ

ನೀವು ನಮ್ಮ ವಾಸಸ್ಥಾನವಾಗಿದ್ದೀರಿ.

ಬೆಟ್ಟಗಳು ಹುಟ್ಟುವುದಕ್ಕಿಂತ ಮುಂಚೆಯೂ

ನೀವು ಲೋಕವನ್ನೂ ನಿರ್ಮಿಸುವುದಕ್ಕಿಂತ

ಮುಂಚೆಯೂ ಯುಗಯುಗಾಂತರಕ್ಕೂ ನೀವು ದೇವರಾಗಿದ್ದೀರಿ.

ನೀವು ಮನುಷ್ಯರನ್ನು ಪುನಃ ಮಣ್ಣಿಗೆ ಸೇರಿಸುತ್ತೀರಿ.

“ಮನುಷ್ಯ ಪುತ್ರರೇ1, ಮಣ್ಣಿಗೆ ಮರಳಿರಿ,” ಎಂದು ಹೇಳುತ್ತೀರಿ.

ಸಾವಿರ ವರ್ಷಗಳು ನಿಮ್ಮ ದೃಷ್ಟಿಗೆ

ಕಳೆದುಹೋದ ಒಂದು ದಿವಸದ ಹಾಗೆಯೂ

ರಾತ್ರಿ ಜಾವದ ಹಾಗೆಯೂ ಇವೆ.

ನೀವು ಜನರನ್ನು ಮರಣ ನಿದ್ರೆಯ ಪ್ರವಾಹದಂತೆ ಹೋಗಲು ಅನುಮತಿಸುತ್ತೀರಿ.

ಅವರು ಬೆಳಿಗ್ಗೆ ಬೆಳೆಯುವ ಹುಲ್ಲಿನ ಹಾಗೆ ಇದ್ದಾರೆ.

ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ.

ಸಂಜೆಯಲ್ಲಿ ಒಣಗಿ ಬಿದ್ದು ಹೋಗುತ್ತದೆ.

ನಾವು ನಿಮ್ಮ ಬೇಸರದಿಂದ ಬಾಧಿತರಾಗಿದ್ದೇವೆ.

ನಿಮ್ಮ ಖಂಡನೆಯಿಂದ ತಲ್ಲಣಿಸುತ್ತೇವೆ.

ನಮ್ಮ ಅಕ್ರಮಗಳನ್ನು ನಿಮ್ಮ ಮುಂದೆ ಇಟ್ಟಿದ್ದೀರಿ.

ನಾವು ಮುಚ್ಚಿಟ್ಟುಕೊಂಡಿರುವ ಪಾಪಗಳು ನಿಮ್ಮ ಸನ್ನಿಧಿಯಲ್ಲಿವೆ.

ನಮ್ಮ ದಿವಸಗಳೆಲ್ಲಾ ನಿಮ್ಮ ಖಂಡನೆಯಿಂದಲೇ ದಾಟಿಹೋದವು.

ನಮ್ಮ ವರ್ಷಗಳನ್ನು ನಿಟ್ಟುಸಿರಿನಲ್ಲಿ ಕಳೆಯುತ್ತಿದ್ದೇವೆ.

ನಮ್ಮ ಜೀವನದ ದಿನಗಳು ಎಪ್ಪತ್ತು ವರ್ಷ,

ಬಲದಿಂದಿದ್ದರೆ ಎಂಬತ್ತು ವರ್ಷ.

ಆದಾಗ್ಯೂ ಅವುಗಳ ಉತ್ತಮ ವರ್ಷಗಳು ಕಷ್ಟವೂ ಪ್ರಯಾಸವೂ ಆಗಿವೆ.

ನಮ್ಮ ದಿನಗಳು ಬೇಗ ತೀರಿಹೋಗುತ್ತವೆ. ನಾವು ಹಾರಿಹೋಗುತ್ತೇವೆ.

ನಿಮ್ಮ ಕೋಪದ ಶಕ್ತಿಯನ್ನು ತಿಳಿದವರ‍್ಯಾರು?

ನಿಮ್ಮ ಮೇಲಿನ ಭಯಭಕ್ತಿಗೆ ಕಾರಣವಾಗಿರುವ ನಿಮ್ಮ ಖಂಡನೆಯನ್ನು ಗ್ರಹಿಸುವವರ‍್ಯಾರು?

ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ,

ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.

ಯೆಹೋವ ದೇವರೇ, ಮನಸ್ಸು ಮಾರ್ಪಡಿಸಿಕೊಳ್ಳಿರಿ. ನೀವು ಎಷ್ಟರವರೆಗೆ ಬೇಸರಗೊಳ್ಳುವಿರಿ?

ನಿಮ್ಮ ಸೇವಕರ ವಿಷಯದಲ್ಲಿ ಅನುಕಂಪ ತೋರಿಸಿರಿ.

ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಮ್ಮನ್ನು ತೃಪ್ತಿಪಡಿಸಿರಿ.

ಆಗ ನಮ್ಮ ದಿನಗಳೆಲ್ಲಾ ಉತ್ಸಾಹ ಧ್ವನಿಗೈದು ನಿಮ್ಮಲ್ಲಿ ಸಂತೋಷಪಡುವೆವು.

ನೀವು ನಮ್ಮನ್ನು ಬಾಧಿಸಿದಷ್ಟು ಕಾಲ ಹರ್ಷಗೊಳಿಸಿರಿ.

ನಾವು ತೊಂದರೆಯನ್ನು ನೋಡಿದಷ್ಟು ವರ್ಷಗಳು ನಮ್ಮನ್ನು ಸಂತೋಷಪಡಿಸಿರಿ.

ನಿಮ್ಮ ಸೇವಕರಿಗೆ ನಿಮ್ಮ ಕೃತ್ಯಗಳನ್ನು ಪ್ರಕಟಿಸಿರಿ.

ಅವರ ಮಕ್ಕಳಿಗೆ ನಿಮ್ಮ ಪ್ರಭೆಯೂ ತೋರಿ ಬರಲಿ.

ನಮ್ಮ ದೇವರಾದ ಯೆಹೋವ ದೇವರ ಮೆಚ್ಚುಗೆಯು ನಮ್ಮ ಮೇಲೆ ಇರಲಿ.

ನಮ್ಮ ಕೈಗಳ ಕೆಲಸವನ್ನು ಸ್ಥಿರಪಡಿಸಿರಿ.

ಹೌದು, ನಮ್ಮ ಕೈಗಳ ಕೆಲಸವನ್ನು ಸ್ಥಾಪಿಸಿರಿ.

Source notes (1)
  1. Footnote ಮನುಷ್ಯ ಪುತ್ರರೇ ಅಂದರೆ ಮಣ್ಣಿನ ಮಕ್ಕಳೇ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.