Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 75
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಟೇತೆಂಬ ರಾಗ. ಆಸಾಫನ ಕೀರ್ತನೆ. ಒಂದು ಗೀತೆ.
ನಿಮ್ಮನ್ನು ಕೊಂಡಾಡುತ್ತೇವೆ; ದೇವರೇ,
ನಿಮ್ಮನ್ನು ಕೊಂಡಾಡುತ್ತೇವೆ; ಏಕೆಂದರೆ ಜನರು ನಿಮ್ಮ ನಾಮವನ್ನು ಜಪಿಸಿ,
ನಿಮ್ಮ ಅದ್ಭುತಗಳನ್ನು ಕುರಿತು ಹೇಳುತ್ತಾರೆ.
“ನಿಯಮಿತ ಸಮಯವನ್ನು ಆಯ್ದುಕೊಳ್ಳುವೆನು.
ನ್ಯಾಯಕ್ಕೆ ಸರಿಯಾಗಿ ನ್ಯಾಯತೀರಿಸುವೆನು,
ಭೂಮಿಯೂ ಅದರ ನಿವಾಸಿಗಳೆಲ್ಲರೂ ಬೆರಗಾಗಿದ್ದಾರೆ.
ನಾನು ಅದರ ಸ್ತಂಭಗಳನ್ನು ನಿಲ್ಲಿಸಿದ್ದೇನೆ.
‘ಅಹಂಕಾರದಿಂದ ವರ್ತಿಸಬೇಡಿರಿ,’ ಎಂದು ಅಹಂಕಾರಿಗೆ ಹೇಳುತ್ತೇನೆ.
‘ನಿಮ್ಮ ಕೊಂಬು ಎತ್ತಬೇಡಿರಿ,’ ಎಂದು ದುಷ್ಟರಿಗೆ ಹೇಳುವೆನು.
ನಿಮ್ಮ ಕೊಂಬನ್ನು ಪರಲೋಕದ ಕಡೆಗೆ ಎತ್ತಬೇಡಿರಿ.
ಹಟಮಾರಿತನದಿಂದ ಮಾತನಾಡಬೇಡಿರಿ,” ಎಂದು ನೀವು ಹೇಳಿದ್ದೀರಿ.
ಏಕೆಂದರೆ ಉದ್ಧಾರವು ಪೂರ್ವದಿಂದಲೂ
ಪಶ್ಚಿಮದಿಂದಲೂ ಅಲ್ಲ, ಇಲ್ಲವೆ ದಕ್ಷಿಣದ ಮರುಭೂಮಿಯಿಂದಲೂ ಬರುವುದಿಲ್ಲ.
ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ.
ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ.
ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ.
ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ.
ಅದನ್ನು ಅವರು ಹೊಯ್ಯುತ್ತಾರೆ.
ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
ನಾನಾದರೋ ಸದಾ ವರ್ಣಿಸುವವನಾಗಿ
ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು.
ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು.
ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.