Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 61
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ.
ದೇವರೇ, ನನ್ನ ಮೊರೆಯನ್ನು ಕೇಳಿರಿ.
ನನ್ನ ಪ್ರಾರ್ಥನೆಯನ್ನು ಆಲಿಸಿರಿ.
ನನ್ನ ಹೃದಯವು ಕುಂದಿ ಹೋಗಿರಲಾಗಿ
ಭೂಮಿಯ ಅಂತ್ಯದಿಂದ ನಿಮಗೆ ಮೊರೆಯಿಡುತ್ತಿರುವೆನು.
ನನಗಿಂತ ಎತ್ತರವಾದ ಬಂಡೆಗೆ ನನ್ನನ್ನು ನಡೆಸಿರಿ.
ನೀವೇ ನನಗೆ ಆಶ್ರಯವಾಗಿದ್ದೀರಿ.
ಶತ್ರುವಿಗೆ ಎದುರಾಗಿ ಬಲವಾದ ಬುರುಜಾಗಿದ್ದೀರಿ.
ನಿಮ್ಮ ಗುಡಾರದಲ್ಲಿ ನಿತ್ಯವಾಗಿ ನಿವಾಸಿಸಲು ಹಾರೈಸುತ್ತಿದ್ದೇನೆ.
ನಿಮ್ಮ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
ದೇವರೇ, ನೀವು ನನ್ನ ಹರಕೆಗಳನ್ನು ಕೇಳಿದ್ದೀರಿ.
ನಿಮ್ಮ ಹೆಸರಿಗೆ ಭಯಪಡುವವರಿಗೆ ಕೊಡುವ ಸೊತ್ತನ್ನು ನನಗೂ ಕೊಟ್ಟಿದ್ದೀರಿ.
ಅರಸನ ಜೀವನದ ದಿನಗಳನ್ನು ಹೆಚ್ಚಿಸಿರಿ.
ಆತನ ವರ್ಷಗಳನ್ನು ತಲತಲಾಂತರಗಳವರೆಗೆ ವೃದ್ಧಿಪಡಿಸಿರಿ.
ಆತನು ಎಂದೆಂದಿಗೂ ದೇವರ ಮುಂದೆ ಆಳಿಕೆಮಾಡಲಿ.
ಆತನನ್ನು ಕಾಯುವ ಹಾಗೆ ನಿಮ್ಮ ಪ್ರೀತಿ, ಸತ್ಯವನ್ನು ನೇಮಿಸಿರಿ.
ಆಗ ನಾನು ನನ್ನ ಹರಕೆಗಳನ್ನು ದಿನದಿನವೂ ಸಲ್ಲಿಸುವೆನು.
ನಿಮ್ಮ ಹೆಸರನ್ನು ನಾನು ಎಂದೆಂದಿಗೂ ಕೀರ್ತಿಸುವೆನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.