Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 44
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಮಕ್ಕಳ ಮಾಸ್ಕಿಲ ಪದ್ಯ.
ದೇವರೇ, ನಾವು ನಮ್ಮ ಕಿವಿಯಾರೆ ಕೇಳಿದ್ದೇವೆ;
ನೀವು ಪೂರ್ವಕಾಲದಲ್ಲಿ ನಮ್ಮ ಪಿತೃಗಳ
ದಿವಸಗಳಲ್ಲಿ ಮಾಡಿದ ಕಾರ್ಯವನ್ನು
ನಮಗೆ ಅವರು ವಿವರಿಸಿದ್ದಾರೆ.
ನೀವು ನಿಮ್ಮ ಕೈಯಿಂದ ಜನಾಂಗಗಳನ್ನು ಹೊರಡಿಸಿ,
ನಮ್ಮ ಪಿತೃಗಳನ್ನು ನೆಲೆಗೊಳಿಸಿದಿರಿ;
ನೀವು ವೈರಿಗಳನ್ನು ತೆಗೆದುಹಾಕಿ,
ನಮ್ಮ ಪಿತೃಗಳಿಗೆ ಸಮೃದ್ಧಿಯನ್ನುಂಟು ಮಾಡಿದಿರಿ.
ನಮ್ಮ ಪಿತೃಗಳು ತಮ್ಮ ಖಡ್ಗದಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ;
ಅವರ ತೋಳು ಅವರಿಗೆ ಜಯ ತರಲಿಲ್ಲ;
ಆದರೆ ನಿಮ್ಮ ಬಲಗೈಯೂ ನಿಮ್ಮ ತೋಳೂ ನಿಮ್ಮ ಮುಖದ ಪ್ರಕಾಶವೇ ಅವರಿಗೆ ಜಯವನ್ನು ತಂದಿತು.
ಏಕೆಂದರೆ ಅವರನ್ನು ನೀವು ಪ್ರೀತಿಸಿದಿರಿ.
ನೀವೇ ನನ್ನ ಅರಸರೂ ದೇವರೂ ಆಗಿದ್ದೀರಿ.
ಯಾಕೋಬಿಗೆ ಜಯವನ್ನು ಆಜ್ಞಾಪಿಸುವ ದೇವರಾಗಿದ್ದೀರಿ.
ನಿಮ್ಮಿಂದ ನಮ್ಮ ವೈರಿಗಳನ್ನು ದಬ್ಬುವೆವು;
ನಿಮ್ಮ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
ನಾನು ನನ್ನ ಬಿಲ್ಲಿನಲ್ಲಿ ಭರವಸೆ ಇಡುವುದಿಲ್ಲ;
ನನ್ನ ಖಡ್ಗವು ನನಗೆ ಜಯ ತರುವುದಿಲ್ಲ.
ಆದರೆ ನೀವು ನಮ್ಮ ವೈರಿಗಳ ಮೇಲೆ ನಮಗೆ ಜಯವನ್ನು ಕೊಟ್ಟಿದ್ದೀರಿ.
ನೀವು ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಿರಿ.
ದೇವರಲ್ಲಿ ದಿನವೆಲ್ಲಾ ನಾವು ಹಿಗ್ಗುತ್ತಿದ್ದೇವೆ;
ನಿಮ್ಮ ಹೆಸರನ್ನು ಯುಗಯುಗಕ್ಕೂ ಕೊಂಡಾಡುವೆವು.
ಆದರೆ ಈಗ ನೀವು ನಮ್ಮನ್ನು ತಳ್ಳಿಬಿಟ್ಟದ್ದರಿಂದ ನಾವು ಕುಗ್ಗಿಹೋಗಿದ್ದೇವೆ.
ನಮ್ಮ ಸೈನ್ಯಗಳ ಸಂಗಡ ನೀವು ಹೊರಡಲಿಲ್ಲ.
ವೈರಿಯ ಮುಂದೆ ನಾವು ಓಡಿಹೋಗುವಂತೆ ಮಾಡಿದ್ದೀರಿ.
ನಮ್ಮ ವೈರಿಗಳು ನಮ್ಮ ಸೊತ್ತನ್ನು ಕೊಳ್ಳೆ ಹೊಡೆಯುತ್ತಾರೆ.
ಕಡಿಯತಕ್ಕ ಕುರಿಗಳಂತೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀರಿ;
ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀರಿ.
ನಿಮ್ಮ ಜನರನ್ನು ನೀವು ಕ್ರಯವಿಲ್ಲದೆ ಮಾರಿಬಿಟ್ಟಂತಿದೆ.
ಆ ಮಾರಾಟದಿಂದ ಲಾಭ ಏನೂ ಇಲ್ಲದಂತಿದೆ.
ನಮ್ಮ ನೆರೆಯವರಿಗೆ ನಾವು ನಿಂದೆಯಾಗಿದ್ದೇವೆ.
ನಮ್ಮ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವೂ ಆಗಿದ್ದೇವೆ.
ನಮ್ಮನ್ನು ಇತರ ದೇಶಗಳವರ ಗಾದೆಗೆ ಆಸ್ಪದ ಮಾಡಿರುವಿರಿ;
ಅವರು ನಮ್ಮನ್ನು ಪರಿಹಾಸ್ಯದ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.
ನಿಂದಕನ ಮತ್ತು ದೂಷಕನ ಮಾತುಗಳಿಗೂ
ಮುಯ್ಯಿಗೆ ಮುಯ್ಯಿ ತೀರಿಸುವ ಶತ್ರುವಿನ ನಿಮಿತ್ತವೂ,
ಸದಾ ನನ್ನ ಅವಮಾನವು ನನ್ನ ಮುಂದೆ ಇದೆ;
ನನ್ನ ಮುಖವು ನಾಚಿಕೆಯಿಂದ ಮುಚ್ಚಿದೆ.
ಇದೆಲ್ಲಾ ನಮ್ಮ ಮೇಲೆ ಬಂತು;
ಆದರೆ ನಾವು ನಿಮ್ಮನ್ನು ಮರೆತುಬಿಡಲಿಲ್ಲ;
ನಿಮ್ಮ ಒಡಂಬಡಿಕೆಯನ್ನು ಬಿಡಲಿಲ್ಲ.
ನಮ್ಮ ಹೃದಯವು ಹಿಂದಿರುಗಲಿಲ್ಲ;
ನಮ್ಮ ಹೆಜ್ಜೆಗಳು ನಿಮ್ಮ ಹಾದಿಯಿಂದ ತೊಲಗಲಿಲ್ಲ.
ಆದರೂ ನರಿಗಳ ವಾಸಸ್ಥಳದಂತೆ ನಮ್ಮ ದೇಶವಿದೆ.
ಕಾರ್ಗತ್ತಲಿನ ನೆರಳು ನಮ್ಮನ್ನು ಮುಚ್ಚಿಬಿಟ್ಟಂತಿದೆ.
ನಾವು ನಮ್ಮ ದೇವರ ಹೆಸರನ್ನು ಮರೆತು
ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದ್ದರೆ,
ದೇವರೇ ಹೃದಯದ ರಹಸ್ಯಗಳನ್ನು ತಿಳಿದಿರುವ ನಿಮಗೆ
ಅವೆಲ್ಲವೂ ಮರೆಯಾಗಿರುತ್ತಿರಲಿಲ್ಲ.
ಹೌದು, ನಿಮಗೋಸ್ಕರ ನಾವು ದಿನವೆಲ್ಲಾ ಮರಣಕ್ಕೆ ಗುರಿಯಾಗಿದ್ದೇವೆ.
ವಧಿಸಲಿಕ್ಕಾಗಿರುವ ಕುರಿಗಳಂತೆ ಜನರು ನಮ್ಮನ್ನು ಎಣಿಸಿದ್ದಾರೆ.
ಯೆಹೋವ ದೇವರೇ, ಏಳಿರಿ, ಹೌದು ಎದ್ದೇಳಿರಿ
ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡಿರಿ.
ಏಕೆ ನಿಮ್ಮ ಮುಖವನ್ನು ಮರೆಮಾಡಿಕೊಂಡಿದ್ದೀರಿ?
ನಮ್ಮ ಸಂಕಟ ಬಾಧೆಗಳನ್ನು ಮರೆತುಬಿಡುವಿರಾ?
ನಮ್ಮ ಪ್ರಾಣವು ಮಣ್ಣು ಪಾಲಾದಂತಿದೆ.
ನಮ್ಮ ಶರೀರವು ನೆಲ ಪಾಲಾದಂತಿದೆ.
ನಮಗೆ ಸಹಾಯಕರಾಗಿ ಏಳಿರಿ;
ನಿಮ್ಮ ಒಡಂಬಡಿಕೆಯ ಪ್ರೀತಿಗಾಗಿ ನಮ್ಮನ್ನು ವಿಮೋಚಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.