Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 39

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದೂತೂನನಿಗಾಗಿ, ದಾವೀದನ ಕೀರ್ತನೆ.

“ನನ್ನ ನಾಲಿಗೆಯಿಂದ ಪಾಪಮಾಡದಂತೆ ಜಾಗರೂಕನಾಗಿರುವೆನು,

ನನ್ನ ಮಾರ್ಗಗಳನ್ನು ಕಾಪಾಡಿಕೊಳ್ಳುವೆನು.

ದುಷ್ಟರು ನನ್ನ ಮುಂದೆ ಇರುವಾಗ

ನನ್ನ ಬಾಯಿಗೆ ಕಡಿವಾಣ ಹಾಕಿಕೊಳ್ಳುವೆನು,”

ಎಂದು ತೀರ್ಮಾನಿಸಿಕೊಂಡೆನು.

ಆದ್ದರಿಂದ ನಾನು ಮೌನವಾಗಿದ್ದೆನು.

ಒಳ್ಳೆಯದನ್ನು ಸಹ ನಾನು ಆಡದೆ ಸುಮ್ಮನಿದ್ದೆನು.

ಆದರೆ ನನ್ನ ವ್ಯಥೆಯು ಅಧಿಕವಾಯಿತು.

ನನ್ನ ಹೃದಯವು ಸಂತಾಪದಿಂದ ಕಾವೇರಿತು.

ನಾನು ಧ್ಯಾನವು ಬೆಂಕಿಯಂತೆ ಉರಿಯಿತು.

ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು:

“ಯೆಹೋವ ದೇವರೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ

ನನ್ನ ಜೀವನದ ಅಂತ್ಯವ ನನಗೆ ತೋರಿಸಿಕೊಡಿರಿ,

ನನ್ನ ದಿನಗಳು ಕೊಂಚವೆಂಬುದನ್ನೂ ನನಗೆ ತಿಳಿಸಿರಿ.

ಇಗೋ, ನನ್ನ ದಿವಸಗಳನ್ನು ಅಂಗೈ ಅಗಲದಷ್ಟು ಮಾಡಿದ್ದೀರಿ.

ನನ್ನ ಆಯುಷ್ಯವು ನಿಮ್ಮ ಮುಂದೆ ಏನೂ ಇಲ್ಲದ ಹಾಗಿದೆ;

ಪ್ರತಿ ಮನುಷ್ಯನ ಜೀವನ

ಬರೀ ಉಸಿರೇ.

“ನಿಶ್ಚಯವಾಗಿ ಮನುಷ್ಯನು ಮಾಯಾರೂಪದಿಂದ ನಡೆದಾಡುತ್ತಾನೆ;

ಅವನು ಸಡಗರದಿಂದ ಐಶ್ವರ್ಯವನ್ನು ರಾಶಿಯಾಗಿ ಕೂಡಿಸಿಕೊಳ್ಳುತ್ತಾನೆ;

ಆದರೆ ಅದನ್ನು ಅನುಭವಿಸುವವರು ಯಾರೋ ಅರಿಯನು.

“ಹೀಗಿರಲಾಗಿ ಯೆಹೋವ ದೇವರೇ, ನಾನು ನಿರೀಕ್ಷಿಸುವುದೇನು?

ನನ್ನ ನಿರೀಕ್ಷೆ ನಿಮ್ಮಲ್ಲಿ ಇದೆ.

ನನ್ನ ಎಲ್ಲಾ ಉಲ್ಲಂಘನೆಗಳಿಂದ ನನ್ನನ್ನು ಬಿಡಿಸಿರಿ;

ಬುದ್ಧಿಹೀನನ ನಿಂದೆಗೆ ನನ್ನನ್ನು ಪರಿಹಾಸ್ಯ ಮಾಡಬೇಡಿರಿ.

ನಾನು ಮೌನವಾದೆನು, ಬಾಯಿ ತೆರೆಯಲಿಲ್ಲ;

ಇದನ್ನು ಮಾಡಿದವರು ನೀವೇ.

ನಿಮ್ಮ ಪೆಟ್ಟನ್ನು ನನ್ನಿಂದ ತೊಲಗಿಸಿರಿ;

ನಿಮ್ಮ ಕೈಯ ಹೊಡೆತದಿಂದ ನಾನು ಕುಗ್ಗಿ ಹೋಗಿದ್ದೇನೆ.

ಪಾಪದ ನಿಮಿತ್ತ ನೀವು ಮನುಷ್ಯನನ್ನು ಗದರಿಸಿ ಶಿಕ್ಷಿಸುವಾಗ

ಅವನ ಐಶ್ವರ್ಯವು ನುಸಿ ಹಿಡಿದಂತೆ ಹಾಳಾಗಿ ಹೋಗುತ್ತದೆ.

ನಿಶ್ಚಯವಾಗಿ ಪ್ರತಿ ಮನುಷ್ಯನು ಬರೀ ಉಸಿರೇ.

“ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ;

ನನ್ನ ಮೊರೆಗೆ ಕಿವಿಗೊಡಿರಿ;

ನನ್ನ ಕಣ್ಣೀರನ್ನು ನೋಡಿರಿ ಮೌನವಾಗಿರಬೇಡಿರಿ;

ಏಕೆಂದರೆ, ನಾನು ನನ್ನ ಪಿತೃಗಳೆಲ್ಲರ ಹಾಗೆ ನಿಮ್ಮ ಸಂಗಡ ಪರದೇಶಸ್ಥನಂತೆ ವಾಸಿಸುತ್ತೇನೆ;

ನಾನೂ ಪ್ರವಾಸಿಯಾಗಿದ್ದೇನೆ.

ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆ

ನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.