Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 33

ನೀತಿವಂತರೇ, ಯೆಹೋವ ದೇವರಿಗಾಗಿ ಸಂತೋಷದಿಂದ ಹಾಡಿರಿ;

ಯಥಾರ್ಥರು ಅವರನ್ನು ಕೊಂಡಾಡುವುದು ಯೋಗ್ಯವಾಗಿದೆ.

ಯೆಹೋವ ದೇವರನ್ನು ಕಿನ್ನರಿಯಿಂದ ಕೊಂಡಾಡಿರಿ;

ಹತ್ತು ತಂತಿಗಳ ವೀಣೆಯಿಂದ ಅವರನ್ನು ಕೀರ್ತಿಸಿರಿ.

ದೇವರಿಗೆ ಹೊಸಹಾಡನ್ನು ಹಾಡಿರಿ.

ದೊಡ್ಡ ಶಬ್ದದಿಂದ ಇಂಪಾಗಿ ಹಾಡಿರಿ.

ಏಕೆಂದರೆ ಯೆಹೋವ ದೇವರ ವಾಕ್ಯವು ಯಥಾರ್ಥವೂ ಸತ್ಯವೂ ಆಗಿರುತ್ತವೆ.

ಅವರ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನಂಬಿಗಸ್ತರಾಗಿರುತ್ತಾರೆ.

ಅವರು ನೀತಿಯನ್ನೂ, ನ್ಯಾಯವನ್ನೂ ಪ್ರೀತಿಸುತ್ತಾರೆ;

ಭೂಲೋಕವೆಲ್ಲಾ ಯೆಹೋವ ದೇವರ ಒಡಂಬಡಿಕೆಯ ಪ್ರೀತಿಯಿಂದ ತುಂಬಿದೆ.

ಯೆಹೋವ ದೇವರ ವಾಕ್ಯದಿಂದ ಆಕಾಶವೂ,

ಅವರ ಬಾಯಿಯ ಉಸಿರಿನಿಂದ ನಕ್ಷತ್ರ ಮಂಡಲವೂ ಉಂಟಾದವು.

ಅವರು ಸಮುದ್ರದ ನೀರನ್ನು ಒಟ್ಟುಗೂಡಿಸುತ್ತಾರೆ;

ಅವರು ಅಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾರೆ.

ಭೂಲೋಕವೆಲ್ಲಾ ಯೆಹೋವ ದೇವರಿಗೆ ಭಯಪಡಲಿ;

ಭೂಲೋಕ ನಿವಾಸಿಗಳೆಲ್ಲರೂ ಅವರಿಗೆ ಭಯಭಕ್ತಿಯಿಂದಿರಲಿ.

ಏಕೆಂದರೆ ಅವರು ಹೇಳಿದ ಮಾತ್ರಕ್ಕೆ ಸಮಸ್ತವೂ ಸೃಷ್ಟಿಯಾಯಿತು;

ಅವರು ಆಜ್ಞಾಪಿಸಲು ಭೂಲೋಕವು ಸ್ಥಿರವಾಯಿತು.

ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು;

ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.

ಆದರೆ ಯೆಹೋವ ದೇವರ ಆಲೋಚನೆಗಳು ಎಂದೆಂದಿಗೂ

ಅವರ ಹೃದಯದ ಉದ್ದೇಶಗಳು ತಲತಲಾಂತರಕ್ಕೂ ನಿಲ್ಲುತ್ತವೆ.

ಯೆಹೋವ ದೇವರು ಯಾರ ದೇವರಾಗಿದ್ದಾರೋ, ಅಂಥ ಭಾಗ್ಯವಂತರು.

ದೇವರು ತಮಗಾಗಿ ಆಯ್ದುಕೊಂಡ ಜನರೂ ಭಾಗ್ಯವಂತರು.

ಪರಲೋಕದಿಂದ ಯೆಹೋವ ದೇವರು ದೃಷ್ಟಿಸಿ,

ಮಾನವರೆಲ್ಲರನ್ನೂ ನೋಡುತ್ತಾರೆ.

ತಮ್ಮ ನಿವಾಸ ಸ್ಥಳದಿಂದ

ಭೂನಿವಾಸಿಗಳೆಲ್ಲರ ಮೇಲೆ ಕಣ್ಣಿಡುತ್ತಾರೆ.

ಎಲ್ಲರ ಹೃದಯಗಳನ್ನು ರೂಪಿಸುವವರು ದೇವರೇ,

ಜನರು ಮಾಡುವ ಕೆಲಸಗಳನ್ನೆಲ್ಲಾ ಗಮನಿಸುವವರೂ ಅವರೇ.

ಅಧಿಕ ಸೈನ್ಯದಿಂದ ಅರಸನು ಜಯಹೊಂದುವುದಿಲ್ಲ;

ಪರಾಕ್ರಮಶಾಲಿಯು ಅಧಿಕ ಶಕ್ತಿಯಿಂದ ಬಿಡುಗಡೆಯಾಗುವುದಿಲ್ಲ.

ಬಿಡುಗಡೆಗೆ ಕುದುರೆಯ ಬಲ ವ್ಯರ್ಥವಾಗಿದೆ;

ಅದಕ್ಕೆ ಮಹಾಶಕ್ತಿ ಇದ್ದರೂ ಅದು ರಕ್ಷಿಸಲಾರದು.

ಯೆಹೋವ ದೇವರ ಕಣ್ಣು ತಮಗೆ ಭಯಪಡುವವರ ಮೇಲಿರುತ್ತದೆ,

ಅವರ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರ ಮೇಲೆಯೂ ಇರುತ್ತೆ.

ಇದರಿಂದ ದೇವರು ಅವರ ಪ್ರಾಣವನ್ನು ಮರಣದಿಂದ ಬಿಡಿಸಿ,

ಬರಗಾಲದಲ್ಲಿ ಅವರ ಜೀವವನ್ನು ಕಾಪಾಡುತ್ತಾರೆ.

ನಮ್ಮ ಪ್ರಾಣವು ಯೆಹೋವ ದೇವರಿಗಾಗಿ ಕಾದಿದೆ;

ನಮ್ಮ ಸಹಾಯವೂ ನಮ್ಮ ಗುರಾಣಿಯೂ ಅವರೇ.

ದೇವರಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ;

ನಾವು ಅವರ ಪರಿಶುದ್ಧ ಹೆಸರಿನಲ್ಲಿ ಭರವಸೆ ಇಟ್ಟಿದ್ದೇವೆ.

ನಾವು ನಿಮ್ಮನ್ನು ನಿರೀಕ್ಷಿಸುವ ಪ್ರಕಾರ, ಯೆಹೋವ ದೇವರೇ,

ನಿಮ್ಮ ಒಡಂಬಡಿಕೆಯ ಪ್ರೀತಿಯು ನಮ್ಮ ಮೇಲೆ ಇರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.