Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 24

ದಾವೀದನ ಕೀರ್ತನೆ.

ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರದ್ದೇ;

ಲೋಕವೂ ಅದರ ನಿವಾಸಿಗಳೂ ಅವರಿಗೇ ಸೇರಿದ್ದು.

ಏಕೆಂದರೆ ಅವರು ಸಮುದ್ರಗಳ ಮೇಲೆ ಅದನ್ನು ಸ್ಥಾಪಿಸಿ

ಪ್ರವಾಹಗಳ ಮೇಲೆ ಅದನ್ನು ಸ್ಥಿರಪಡಿಸಿದ್ದಾರೆ.

ಯೆಹೋವ ದೇವರ ಪರ್ವತವನ್ನು ಹತ್ತುವವನು ಯಾರು?

ಅವರ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು?

ಶುದ್ಧಹಸ್ತಗಳೂ ನಿರ್ಮಲವಾದ ಹೃದಯವೂ ಉಳ್ಳವನಾಗಿದ್ದು;

ವಂಚನೆಯಿಂದ ಮುಕ್ತನಾಗಿ,

ಮೋಸದಿಂದ ಆಣೆ ಇಡದೆಯೂ ಇರುವವನೇ.

ಇಂಥವರೇ ಯೆಹೋವ ದೇವರಿಂದ ಆಶೀರ್ವಾದವನ್ನು ಹೊಂದುವರು.

ತಮ್ಮ ರಕ್ಷಕ ಆಗಿರುವ ದೇವರಿಂದಲೇ ನಿರ್ದೋಷಿಯಾಗುವರು.

ಇಂಥವರೇ ದೇವರನ್ನು ಹುಡುಕುವ ಸಂತತಿಯು;

ಯಾಕೋಬನ ದೇವರೇ, ನಿಮ್ಮನ್ನು ಹುಡುಕುವವರು ಇಂಥವರೇ.

ದ್ವಾರಗಳೇ ತಲೆ ಎತ್ತಿ ನೋಡಿರಿ,

ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ;

ಮಹಿಮೆಯ ಅರಸ ಒಳಗೆ ಬರಲಿದ್ದಾರೆ.

ಈ ಮಹಿಮೆಯ ಅರಸ ಯಾರು?

ಬಲವೂ ಪರಾಕ್ರಮವೂ ಉಳ್ಳ ಯೆಹೋವ ದೇವರೇ ಆಗಿರುತ್ತಾರೆ.

ಯೆಹೋವ ದೇವರು ಯುದ್ಧದಲ್ಲಿ ಪರಾಕ್ರಮವುಳ್ಳವರು ಆಗಿರುತ್ತಾರೆ.

ದ್ವಾರಗಳೇ, ತಲೆ ಎತ್ತಿ ನೋಡಿರಿ,

ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ;

ಮಹಿಮೆಯ ಅರಸ ಒಳಗೆ ಬರಲಿದ್ದಾರೆ.

ಮಹಿಮೆಯ ಅರಸ ಯಾರು?

ಸೇನಾಧೀಶ್ವರ ಯೆಹೋವ ದೇವರೇ ಆಗಿರುತ್ತಾರೆ.

ಇವರೇ ಮಹಿಮೆಯ ಅರಸರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.