Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 149
ಯೆಹೋವ ದೇವರನ್ನು ಸ್ತುತಿಸಿರಿ.
ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ,
ಭಕ್ತರ ಸಭೆಯಲ್ಲಿ ದೇವರ ಸ್ತೋತ್ರವನ್ನೂ ಹಾಡಿರಿ.
ಇಸ್ರಾಯೇಲು ತನ್ನನ್ನು ಉಂಟುಮಾಡಿದ ದೇವರಲ್ಲಿ ಸಂತೋಷಿಸಲಿ;
ಚೀಯೋನಿನ ಜನರು ತಮ್ಮ ಅರಸರಲ್ಲಿ ಉಲ್ಲಾಸಿಸಲಿ.
ದೇವರ ಹೆಸರನ್ನು ನರ್ತಿಸುತ್ತಾ ಸ್ತುತಿಸಲಿ;
ದಮ್ಮಡಿಯಿಂದಲೂ ಕಿನ್ನರಿಯಿಂದಲೂ ದೇವರನ್ನು ಕೀರ್ತಿಸಲಿ.
ಏಕೆಂದರೆ ಯೆಹೋವ ದೇವರು ತಮ್ಮ ಜನರಲ್ಲಿ ಹರ್ಷಿಸುತ್ತಾರೆ.
ದೀನರನ್ನು ಜಯದ ಕಿರೀಟದಿಂದ ಅಲಂಕರಿಸುತ್ತಾರೆ.
ಇಂಥಾ ಸನ್ಮಾನದಲ್ಲಿ ನಂಬಿಗಸ್ತರು ಸಂತೋಷಪಡಲಿ
ಹಾಸಿಗೆಯಲ್ಲಿರುವಾಗಲೂ ಆನಂದಗಾನ ಹಾಡಲಿ.
ಉನ್ನತ ದೇವರ ಸ್ತೋತ್ರವು ಅವರ ಬಾಯಿಯಲ್ಲಿ ಇರಲಿ.
ಇಬ್ಬಾಯಿ ಖಡ್ಗ ಅವರ ಕೈಯಲ್ಲಿಯೂ ಇರಲಿ.
ಜನಾಂಗಗಳಲ್ಲಿ ನ್ಯಾಯ ಪ್ರತೀಕಾರವಾಗಲಿ,
ಅಪರಾಧಿಗಳಿಗೆ ಶಿಕ್ಷೆಯಾಗಲಿ.
ಅಪರಾಧದ ಅರಸರನ್ನು ಸಂಕೋಲೆಗಳಿಂದಲೂ,
ಪ್ರಮುಖರನ್ನು ಕಬ್ಬಿಣದ ಬೇಡಿಗಳಿಂದಲೂ ಬಂಧಿಸಲಿ.
ಬರೆದಿರುವ ನ್ಯಾಯವಿಧಿಯು ಅವರಲ್ಲಿ ನೆರವೇರಲಿ,
ದೇವರ ಭಕ್ತರೆಲ್ಲರಿಗೆ ಈ ಗೌರವವಿರುತ್ತದೆ.
ಯೆಹೋವ ದೇವರನ್ನು ಸ್ತುತಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.